ಕೊಪ್ಪಳ: ಬಳ್ಳಾರಿಯ ಕಂಪ್ಲಿ ಪಟ್ಟಣದ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಕೊಪ್ಪಳ ಜಿಲ್ಲೆಯ 34 ಜನರ ಲ್ಯಾಬ್ ವರದಿ ನೆಗಟಿವ್ ಬಂದಿದೆ. ಈ ಮೂಲಕ ಕೊಪ್ಪಳ ಜಿಲ್ಲೆಯ ಜನರಿಗೆ ಮತ್ತೊಮ್ಮೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಅವರು, ಕಂಪ್ಲಿಯ ಸೋಂಕಿತ ವ್ಯಕ್ತಿಯೊಂದಿಗೆ ಪ್ರಯಾಣಿಸಿದ್ದ ಹಾಗೂ ಪ್ರಾಥಮಿಕ ಸಂಪರ್ಕ ಹೊಂದಿದ್ದ 34 ಜನರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. ಅವರ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ತಪಾಸಣೆಗಾಗಿ ಲ್ಯಾಬ್ ಗೆ ಕಳಿಸಲಾಗಿತ್ತು. ಸದ್ಯ ಅವರ ಲ್ಯಾಬ್ ರಿಪೋರ್ಟ್ ಬಂದಿದ್ದು, ಎಲ್ಲ 34 ಜನರ ವರದಿ ನೆಗಟಿವ್ ಬಂದಿದೆ. ಜಿಲ್ಲೆಯಲ್ಲಿ ಈವರೆಗೂ ಒಟ್ಟು 1268 ಜನರ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, ಅಷ್ಟೂ ವರದಿಯೂ ನೆಗಟಿವ್ ಬಂದಿದೆ. ಸದ್ಯ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣವಿಲ್ಲ ಎಂದು ಸ್ಪಷ್ಟಪಡಿಸಿದರು.
ಸೋಂಕಿತ ವ್ಯಕ್ತಿ ಮೇ 5 ರಂದು ಬೆಂಗಳೂರಿನಿಂದ ಗಂಗಾವತಿಗೆ ಬಸ್ ಮೂಲಕ ಬಂದು ಅಲ್ಲಿಂದ ಆಟೋ ಮೂಲಕ ಕಂಪ್ಲಿಗೆ ತೆರಳಿದ್ದ. ಆ ವ್ಯಕ್ತಿಯ ಜೊತೆಗೆ ಪ್ರಯಾಣ ಮಾಡಿದ್ದ ಪ್ರಯಾಣಿಕರು, ಬಸ್ ಚಾಲಕ, ಆಟೋ ಚಾಲಕ ಹಾಗೂ ಸ್ಕ್ರೀನಿಂಗ್ ಮಾಡಿದ್ದ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಪತ್ತೆ ಹಚ್ಚಿ ಜಿಲ್ಲಾಡಳಿತ ಕ್ವಾರಂಟೈನ್ ಮಾಡಿತ್ತು. ಈಗ ಪ್ರಾಥಮಿಕ ಸಂಪರ್ಕ ಹೊಂದಿದ್ದ 34 ಜನರ ವರದಿ ನೆಗಟಿವ್ ಬಂದಿರೋದು ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಾಗಿದೆ.