ಕೊಪ್ಪಳ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಜಿಲ್ಲೆಯ ವಿದ್ಯಾರ್ಥಿವೋರ್ವ ಕೋವಿಡ್ ಕೇರ್ ಸೆಂಟರ್ನಲ್ಲಿದ್ದುಕೊಂಡು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದು, ಇದೀಗ 579 ಅಂಕ ಪಡೆಯುವ ಮೂಲಕ ಫಸ್ಟ್ ಕ್ಲಾಸ್ನಲ್ಲಿ ತೇರ್ಗಡೆ ಹೊಂದಿದ್ದಾನೆ.
ಜಿಲ್ಲೆಯ ಕುಕನೂರು ತಾಲೂಕಿನ ತಳಕಲ್ ಗ್ರಾಮದ ಮಾರುತಿ ಎಂಬ ವಿದ್ಯಾರ್ಥಿ 579 ಅಂಕ ಪಡೆದು ತೇರ್ಗಡೆ ಹೊಂದಿದ್ದಾನೆ. ಎಸ್ಎಸ್ಎಲ್ ಸಿ ಪರೀಕ್ಷೆ ಹಿಂದಿನ ದಿನದಂದು ವಿದ್ಯಾರ್ಥಿ ಮಾರುತಿಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು. ಇದರಿಂದಾಗಿ ವಿದ್ಯಾರ್ಥಿ ಜಿಲ್ಲಾಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆದರೆ ಆತನಿಗೆ ಪರೀಕ್ಷೆ ಬರೆಯಲು ಎಲ್ಲ ರೀತಿಯ ಅನುಕೂಲ ಮಾಡಿಕೊಡಲಾಗಿತ್ತು.
ಮಂಡಲಗಿರಿ ಸರ್ಕಾರಿ ಶಾಲೆಯ ವಿದ್ಯಾರ್ಥಿಯಾಗಿರುವ ಮಾರುತಿಗೆ ಪ್ರತ್ಯೇಕವಾಗಿ ಆಸ್ಪತ್ರೆಯಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿತ್ತು. ಕೋವಿಡ್ ಮಧ್ಯೆ ಕೂಡ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ಒಟ್ಟು 625 ಅಂಕಗಳಿಗೆ 579 ಮಾರ್ಕ್ಸ್ ಪಡೆದು ತೇರ್ಗಡೆ ಹೊಂದಿದ್ದಾನೆ. ಅಲ್ಲದೆ, ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ ಗಳಿಸಿರುವುದು ಮಾತ್ರ ಗಮನಾರ್ಹವಾಗಿದೆ.