ಕೊಪ್ಪಳ: ರಾಜ್ಯ ಸರ್ಕಾರವು ವಿವಿಧ ಕಾಮಗಾರಿಗಳಲ್ಲಿ ಗುತ್ತಿಗೆದಾರರಿಂದ ಶೇ 40ರಷ್ಟು ಲಂಚ ಪಡೆಯುತ್ತಿದೆ ಎಂದು ನಮ್ಮ ಸಂಘದ ಅಧ್ಯಕ್ಷರು ಹೇಳಿರುವುದರಲ್ಲಿ ಸತ್ಯವಿದೆ. ಈಗಿನ ಪರಿಸ್ಥಿತಿಯಲ್ಲಿ ಲಂಚ ನಿರ್ನಾಮ ಅಸಾಧ್ಯವಾದರೂ ಪ್ರಮಾಣ ಕಡಿಮೆ ಮಾಡಬೇಕೆನ್ನುವ ಕಾರಣಕ್ಕೆ ಹೋರಾಟ ಮಾಡುತ್ತಿದ್ದೇವೆ ಎಂದು ಕೊಪ್ಪಳ ಜಿಲ್ಲಾ ಗುತ್ತಿಗೆದಾರರ ಸಂಘದ ಸದಸ್ಯರು ಹೇಳಿದರು.
ಸುದ್ದಿಗೋಷ್ಠಿ ನಡೆಸಿದ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಪ್ಪ ಅರಕೇರಿ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ರಾಜ್ಯ ಸರಕಾರ 40% ಕಮಿಷನ್ ಪಡೆಯುತ್ತಿದೆ ಎಂದು ಮಾಡಿರುವ ಆರೋಪ ಸರಿ ಇದೆ. ಆರೋಪ ಮಾಡುವವರಿಗೆ ರಾಜ್ಯ ಸರಕಾರ ಪುರಾವೆ ಕೇಳುತ್ತಿದೆ. ಲಂಚ ಕೊಟ್ಟಿರುವುದಕ್ಕೆ ಪುರಾವೆ ಸಿಗುವುದಿಲ್ಲ ಎಂದರು.
ಒಂದು ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಬೆಂಗಳೂರಿನಿಂದ ಕೊಪ್ಪಳಕ್ಕೆ ಬರುತ್ತಲೇ ಮೂಲ ಹಣದಲ್ಲಿ 40 ಪರ್ಸೆಂಟ್ ಹಣ ಖರ್ಚಾಗಿರುತ್ತದೆ. ಕೊಪ್ಪಳ ಜಿಲ್ಲೆಯ ಪ್ರತಿಯೊಬ್ಬ ಶಾಸಕರು ಪ್ರತಿಯೊಂದು ಕಾಮಗಾರಿಯಲ್ಲಿ ಕಮಿಷನ್ ಪಡೆಯುತ್ತಿದ್ದಾರೆ. ಆದರೆ ಯಾರ್ಯಾರು ಎಷ್ಟೆಷ್ಟು ತೆಗೆದುಕೊಳ್ಳುತ್ತಿದ್ದಾರೆ ಎಂಬುವುದನ್ನು ಬಹಿರಂಗವಾಗಿ ಹೇಳೋದಕ್ಕೆ ಆಗುವುದಿಲ್ಲ. ಈ ಮುಂಚೆಯು ಕಮಿಷನ್ ಇತ್ತು. ಆದರೆ, ಪ್ರಮಾಣ ಕಡಿಮೆ ಇತ್ತು. ಕೇವಲ 5 ರಷ್ಟು ಕಮಿಷನ್ ಇತ್ತು. ಅದು ಸಿದ್ದರಾಮಯ್ಯ ಸರಕಾರದಲ್ಲಿ 10 ರಷ್ಟಾಗಿತ್ತು. ಈಗ 40 ರಷ್ಟಾಗಿದೆ. ಭ್ರಷ್ಟಾಚಾರ ಸಂಪೂರ್ಣ ಬಂದ್ ಮಾಡಲು ಆಗೋದಿಲ್ಲ ಎಂದು ಅವರು ವಿವರಿಸಿದರು.
ಇದನ್ನೂ ಓದಿ : ಮುಖ್ಯಮಂತ್ರಿ ಸೇರಿ ಎಲ್ಲರೂ ಭ್ರಷ್ಟರು, ಕಮಿಷನ್ ಬಗ್ಗೆ ಮೋದಿಗೆ ಮತ್ತೊಮ್ಮೆ ಪತ್ರ: ಕೆಂಪಣ್ಣ