ಕೊಪ್ಪಳ: ಎರಡನೇ ಅಲೆಯ ಕೊರೊನಾ ಸೋಂಕಿನ ಭೀತಿಯಲ್ಲಿರುವಾಗ ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ತಜ್ಞರ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಈಗಿನಿಂದಲೇ ಮೂರನೇ ಅಲೆಯಿಂದ ಮಕ್ಕಳ ರಕ್ಷಣೆ ಮಾಡುವ ಕುರಿತಂತೆ ಕೊಪ್ಪಳ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡಿದ್ದು, ಜನರಲ್ಲಿ ಭೀತಿ ಮೂಡಿಸಿದೆ. ಈ ನಡುವೆ ಮೂರನೇ ಅಲೆ ಬರುತ್ತದೆ. ಅದು ಮಕ್ಕಳ ಮೇಲೆ ಬಹಳ ಪ್ರಭಾವ ಬೀರಲಿದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಹೀಗಾಗಿ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ ಎನ್ನಲಾದ ಮೂರನೇ ಅಲೆ ಹರಡದಂತೆ ಕಡಿವಾಣ ಹಾಕಲು ಹಾಗೂ ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಕೊಪ್ಪಳ ಜಿಲ್ಲಾಡಳಿತ ಈಗಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಜಿಲ್ಲೆಯಲ್ಲಿ ಸುಮಾರು 16 ಲಕ್ಷ ದಷ್ಟು ಜನಸಂಖ್ಯೆ ಇದೆ. ಈ ಪೈಕಿ 18 ವರ್ಷದೊಳಗಿನ ವಯಸ್ಸಿನ ಅಂದಾಜು ಸುಮಾರು 3 ಲಕ್ಷ ಮಕ್ಕಳು ಇದ್ದಾರೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದ್ದು, 18 ವರ್ಷದೊಳಗಿನ ಎಲ್ಲ ಮಕ್ಕಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.
ಶಿಕ್ಷಕರನ್ನು ಬಳಸಿಕೊಂಡು ಮಕ್ಕಳ ಆರೋಗ್ಯದ ಕುರಿತ ಎಲ್ಲ ಮಾಹಿತಿಯನ್ನು ಸಂಗ್ರಹಿಸಲು ಜಿಲ್ಲಾಡಳಿತ ಮುಂದಾಗಿದೆ. ಜೂನ್ 2 ರಿಂದ ಶಿಕ್ಷಕರು ಮಕ್ಕಳ ಸಮೀಕ್ಷೆ ನಡೆಸಲಿದ್ದಾರೆ. ಅಂಗನವಾಡಿ ಮಕ್ಕಳನ್ನೊಳಗೊಂಡು 18 ವರ್ಷದೊಳಗಿನ ಎಲ್ಲ ಮಕ್ಕಳ ಆರೋಗ್ಯದ ಕುರಿತ ಮಾಹಿತಿಯನ್ನು ಪೋಷಕರಿಂದ ಪಡೆದುಕೊಂಡು ಒಂದು ಫಾರ್ಮೆಟ್ ನಲ್ಲಿ ಸಂಗ್ರಹಿಸಲಿದ್ದಾರೆ.
ಮಕ್ಕಳಿಗೆ ಈಗಾಗಲೇ ಯಾವುದಾದರೂ ಕಾಯಿಲೆ ಇದೆಯಾ? ಅವರ ಆರೋಗ್ಯದ ಸ್ಥಿತಿಗತಿ, ಈ ಹಿಂದೆ ಸೋಂಕು ತಗುಲಿತ್ತಾ? ಯಾವುದೇ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರಾ ಎಂಬೆಲ್ಲಾ ಮಾಹಿತಿಯನ್ನು ಪೋಷಕರಿಂದ ಶಿಕ್ಷಕರು ಪಡೆದುಕೊಂಡು ಸಂಗ್ರಹಿಸಲಿದ್ದಾರೆ.
ಇದರ ಜೊತೆಗೆ ಮಕ್ಕಳನ್ನು ವಿನಾಃಕಾರಣ ಹೊರಗೆ ಓಡಾಡದಂತೆ ಹಾಗೂ ಸೋಂಕಿನ ಬಗ್ಗೆ ಜಾಗೃತಿ ವಹಿಸುವಂತೆ ಪಾಲಕರಿಗೆ ತಿಳಿವಳಿಕೆ ಹಾಗೂ ಜಾಗೃತಿ ಮೂಡಿಸಲಾಗುತ್ತದೆ ಎನ್ನುತ್ತಾರೆ ಜಿಲ್ಲಾ ಪಂಚಾಯತ್ ಸಿಇಒ ರಘುನಂದನಮೂರ್ತಿ.
ಎಸ್ಎಸ್ಎಲ್ಸಿ ಪರೀಕ್ಷೆಗಳು ಬರುವ ಸಾಧ್ಯತೆ ಇದ್ದು ಆ ದಿಸೆಯಲ್ಲಿಯೂ ಸಹ ಮಕ್ಕಳು ಮತ್ತು ಮಕ್ಕಳ ಪಾಲಕರಿಗೆ ಸೋಂಕಿನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಮಕ್ಕಳ ಆರೋಗ್ಯದ ಎಲ್ಲ ಮಾಹಿತಿಯನ್ನು ಸಂಗ್ರಹಿಸುವುದರಿಂದ ಅನುಕೂಲವಾಗಲಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ರಘುನಂದನಮೂರ್ತಿ ಅವರು ತಿಳಿಸಿದರು.