ಗಂಗಾವತಿ (ಕೊಪ್ಪಳ): ತನ್ನ ವಿರುದ್ಧ ಪತ್ನಿಗೆ ಚಾಡಿ ಹೇಳುತ್ತಿದ್ದಾನೆ ಎಂದು ಕುಪಿತಗೊಂಡ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಚಾಕು ಇರಿದು ಕೊಲೆ ಮಾಡಿದ ಘಟನೆ ನಗರದ ಎಚ್ಆರ್ಎಸ್ ಕಾಲೋನಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿಯನ್ನು ಮೌಲಾಹುಸೇನ್ (36) ಎಂದು ಗುರುತಿಸಲಾಗಿದೆ.
ಕೊಲೆ ಆರೋಪಿಯನ್ನು ಅದೇ ಏರಿಯಾದ ನೂರ್ ಅಹ್ಮದ್ ಎಂದು ಗುರುತಿಸಲಾಗಿದೆ. ಇಬ್ಬರೂ ಚಿಕನ್ ವ್ಯಾಪಾರಿಗಳಾಗಿದ್ದರು. ಆದರೆ ತನ್ನ ಪತ್ನಿಗೆ ಮೌಲಾ ಹುಸೇನ್ ಚಾಡಿ ಹೇಳುತ್ತಿದ್ದಾನೆ ಎಂಬ ಕಾರಣಕ್ಕೆ ನೂರ್ ಅಹ್ಮದ್ ಈ ಕೃತ್ಯ ಎಸಗಿದ್ದಾನೆ. ಚಾಕು ಇರಿತದಿಂದ ತೀವ್ರ ಗಾಯಕ್ಕೀಡಾದ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಕೊಲೆ ಮಾಡಿದ ಬಳಿಕ ನೂರ್ ಅಹ್ಮದ್ ತನ್ನ ಮೊಬೈಲ್ ಸ್ಟೇಟಸ್ನಲ್ಲಿ ಈ ಬಗ್ಗೆ ಬರೆದುಕೊಂಡು ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ವಿಚಿತ್ರ ಎಂದರೆ ಕೊಲೆಯಾದವ ಮತ್ತು ಕೊಲೆ ಮಾಡಿದವ ಇಬ್ಬರೂ ಒಂದೇ ಕುಟುಂಬದ ಸಹೋದರಿಯರನ್ನು ವಿವಾಹವಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಹವಾ ಸೃಷ್ಟಿಸಲು ಸ್ನೇಹಿತರ ಮೇಲೆ ಹಲ್ಲೆ: ಇತ್ತೀಚೆಗೆ ಜೈಲಿನಿಂದ ಹೊರ ಬಂದಿದ್ದ ಚಂದನ್ ಅಲಿಯಾಸ್ ವೀರು ಬೆಂಗಳೂರು ಪಶ್ಚಿಮ ವಿಭಾಗದ ರೌಡಿಶೀಟರ್ ಹವಾ ಸೃಷ್ಟಿಸಲು ವಿನಾಕಾರಣ ಸ್ನೇಹಿತರ ಮೇಲೆ ಹಲ್ಲೆ ಮಾಡಿರುವ ಘಟನೆ ಅಕ್ಟೋಬರ್ 1 ರಂದು ರಾತ್ರಿ ಕಲಾಸಿಪಾಳ್ಯ ಮುಖ್ಯರಸ್ತೆಯ ಶಮಂತ್ ಬಾರ್ನಲ್ಲಿ ನಡೆದಿತ್ತು. ರೌಡಿಶೀಟರ್ ವೀರುವಿನ ಸಹಚರರು ಮೋಹನ್ ಕುಮಾರ್ ಹಾಗೂ ಸತೀಶ್ ಎಂಬುವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು.
ಚಿಕ್ಕಮಗಳೂರಲ್ಲಿ ಬೇಲಿ ವಿಚಾರಕ್ಕೆ ಚಾಕು ಇರಿತ: ಇಲ್ಲಿನ ವೈದ್ಯ ಗಣೇಶ್ ಎಂಬವರ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕ ಹಾಗೂ ಪಕ್ಕದ ತೋಟದ ಕಾರ್ಮಿಕರಿಬ್ಬರ ಮಧ್ಯೆ ತೋಟದ ಬೇಲಿ ವಿಚಾರವಾಗಿ ಜಗಳ ನಡೆದಿತ್ತು. ವಿಕೋಪಕ್ಕೆ ತಿರುಗಿದ ಜಗಳದಲ್ಲಿ ಗಣೇಶ್ ಅವರ ಕಾರ್ಮಿಕನ ಮೇಲೆ ಪಕ್ಕದ ತೋಟದ ಕಾರ್ಮಿಕ ಚಾಕುವಿನಿಂದ ಹಲ್ಲೆ ನಡೆಸಿದ್ದನು. ಇದರಿಂದ ಗಾಯಗೊಂಡ ಕಾರ್ಮಿಕನಿಗೆ ವೈದ್ಯ ಗಣೇಶ್ ಚಿಕಿತ್ಸೆ ನೀಡಲು ತೆರಳಿದ್ದರು. ಈ ಸಂದರ್ಭದಲ್ಲಿ ಆರೋಪಿ ಕಾರ್ಮಿಕನು ವೈದ್ಯ ಗಣೇಶ್ ಮೇಲೂ ಚಾಕುವಿನಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದ. ತಕ್ಷಣವೇ ಅಲ್ಲಿದ್ದ ಕಾರ್ಮಿಕರೆಲ್ಲ ಸೇರಿ ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ್ದರು.
ಇದನ್ನೂ ಓದಿ: ಬೆಂಗಳೂರು: ರೌಡಿಶೀಟರ್ ಸಹಚರರಿಂದ ಸ್ನೇಹಿತರ ಮೇಲೆ ಹಲ್ಲೆ