ಕೊಪ್ಪಳ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘವು ಕೊಪ್ಪಳ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಲಾಕ್ ಡೌನ್‌ನಿಂದಾಗಿ ದುಡಿಯವ ವರ್ಗಗಳಾದ ಕಾರ್ಮಿಕರು, ಕೂಲಿಕಾರರು, ರೈತರು, ಬಡವರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಕೇವಲ ಟೊಳ್ಳು ಭರವಸೆಯ ಪ್ಯಾಕೇಜ್ ಘೋಷಣೆ ಮಾಡಿ ಸುಮ್ಮನಾಗಿದೆ ಎಂದು ಮನವಿಯಲ್ಲಿ ಆಪಾದಿಸಿದ್ದಾರೆ.
ಮನವಿಯಲ್ಲಿ ಎಲ್ಲ ಕೂಲಿಕಾರ ಕುಟುಂಬಗಳಿಗೆ ತಿಂಗಳಿಗೆ 7500 ರುಪಾಯಿಯಂತೆ 3 ತಿಂಗಳು ಆರ್ಥಿಕ ನೆರವು ನೀಡಬೇಕು. ಎಲ್ಲ ವಲಸೆ ಕಾರ್ಮಿಕರ ಕುಟುಂಬಗಳಿಗೆ ವಿಶೇಷ ನೆರವು, ಲಾಕ್‌ಡೌನ್ ಅವಧಿಯಲ್ಲಿ ಅಪಘಾತದಲ್ಲಿ, ಹಸಿವೆಯಿಂದ ಹಾಗೂ ಆತ್ಮಹತ್ಯೆ ಮಾಡಿಕೊಂಡ ವಲಸೆ ಕಾರ್ಮಿಕರ ಅವಲಂಬಿತರಿಗೆ ಗರಿಷ್ಠ ಪರಿಹಾರ ನೀಡಬೇಕು. ಪ್ರತಿ ದಿನ 600 ರುಪಾಯಿಯಂತೆ ವರ್ಷದಲ್ಲಿ 200 ದಿನಗಳ ಕಾಲ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಕೊಡಬೇಕು. ಈ ಎಲ್ಲಾ ಬೇಡಿಕೆಗಳನ್ನು ಸರ್ಕಾರ ಈಡೇರಿಸಿ ಬಡವರಿಗೆ ಕೊನೆಪಕ್ಷ ಉಸಿರಾಡಲು ಸಹಕರಿಸಬೇಕು ಎಂದು ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಉಲ್ಲೇಖಿಸಿ ಆಗ್ರಹಿಸಿದೆ.