ಗಂಗಾವತಿ: ಕೊರೊನಾ ತಾಲೂಕಿನಲ್ಲಿ ವ್ಯಾಪಕ ಪ್ರಮಾಣದಲ್ಲಿ ಹರಡುತ್ತಿದ್ದು, ವಿವಿಧ ಇಲಾಖೆಯ ಆಯಕಟ್ಟಿನ ಅಧಿಕಾರಿಗಳಿಗೆ ಸೋಂಕು ಕಂಟಕವಾಗಿ ಕಾಡುತ್ತಿದೆ. ಇದೀಗ ಕನಕಗಿರಿಯ ತಹಶೀಲ್ದಾರ್ ರವಿ ಅಂಗಡಿ ಅವರಲ್ಲಿಯೂ ಕೊರೊನಾ ಪಾಸಿಟಿವ್ ಕಾಣಸಿಕೊಂಡಿದೆ.
ಕೊರೊನಾದ ಪ್ರಾಥಮಿಕ ಲಕ್ಷಣಗಳಾದ ನೆಗಡಿ, ಚಳಿ, ಜ್ವರ ಕಾಣಿಸಿಕೊಂಡ ಹಿನ್ನೆಲೆ ತಹಶೀಲ್ದಾರ್ ಅವರು ರ್ಯಾಪಿಡ್ ಟೆಸ್ಟ್ಗೆ ಒಳಗಾಗಿದ್ದರು. ಟೆಸ್ಟ್ನಲ್ಲಿ ಪಾಸಿಟಿವ್ ಬಂದ ಹಿನ್ನೆಲೆ ಮೊದಲಿಗೆ ನಗರದ ಖಾಸಗಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಅವರ ಸೂಚನೆ ಮರೆಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ ವಿಶೇಷ ಕೊವಿಡ್ ಕೇಂದ್ರದಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ತಹಶೀಲ್ದಾರ್ ರವಿ ಅಂಗಡಿ, ಆರೋಗ್ಯದಲ್ಲಿ ಸ್ಥಿರತೆ ಇದ್ದು, ಗುಣಮುಖನಾಗುತ್ತಿದ್ದೇನೆ. ಚಿಕಿತ್ಸೆಗೆ ದಾಖಲಾಗುತ್ತಿರುವ ಪ್ರತಿಯೊಬ್ಬರಿಗೂ ಉತ್ತಮ ವೈದ್ಯಕೀಯ ಸೇವೆಯನ್ನು ಕೇಂದ್ರದಲ್ಲಿ ನೀಡಲಾಗುತ್ತದೆ ಎಂದರು.