ಕೊಪ್ಪಳ: ಕನಕದಾಸರ ಜಯಂತಿಯನ್ನು ಕೊಪ್ಪಳದಲ್ಲಿ ಸರಳವಾಗಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಜಿಲ್ಲಾಡಳಿತದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಇರುವ ಕನಕದಾಸರ ವೃತ್ತದಲ್ಲಿ ಕನಕದಾಸರ ಭಾವಚಿತ್ರಕ್ಕೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹಾಗೂ ಸಂಸದ ಸಂಗಣ್ಣ ಕರಡಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಬಳಿಕ ಮಾತನಾಡಿದ ಶಾಸಕ ಹಿಟ್ನಾಳ್, ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಇರುವ ಕನಕದಾಸರ ವೃತ್ತದ ಅಭಿವೃದ್ಧಿ ಮತ್ತು ಪುತ್ಥಳಿ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ. ಅತ್ಯಂತ ಆಕರ್ಷಕ ಮತ್ತು ಗುಣಮಟ್ಟದಿಂದ ವೃತ್ತದ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಕೆಲ ಕಾರಣದಿಂದ ಈ ಕಾರ್ಯ ವೇಗ ಪಡೆದಿಲ್ಲ. ವೃತ್ತದ ಅಭಿವೃದ್ಧಿ ಕಾರ್ಯ ಶೀಘ್ರವೇ ಪೂರ್ಣಗೊಳ್ಳುತ್ತದೆ. ನಗರದಲ್ಲಿರುವ ಬಹುತೇಕ ಸರ್ಕಲ್ಗಳಲ್ಲಿ ಗೂಡಂಗಡಿಗಳು ಸುತ್ತುವರೆದಿದ್ದು, ಆ ವೃತ್ತಗಳು ಕಾಣದಂತಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು.
ಓದಿ: ಖಡಕ್ ರೊಟ್ಟಿ, ಮೆಣಸಿನಕಾಯಿ ಚಟ್ನಿ ಶತಾಯುಷಿ ಸಿದ್ದವ್ವಜ್ಜಿ ಆರೋಗ್ಯದ ಸೀಕ್ರೆಟ್!!
ಈ ವೇಳೆ ಅಪರ ಜಿಲ್ಲಾಧಿಕಾರಿ ಎಂಪಿ ಮಾರುತಿ, ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ನಗರಸಭೆ ಪ್ರಭಾರಿ ಆಯುಕ್ತ ಮಂಜುನಾಥ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.