ಕೊಪ್ಪಳ: ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಪ್ರತಿ ಮತದಾರರಿಗೆ 100 ರೂಪಾಯಿ ಹಂಚಲು ಜಿಲ್ಲಾ ಪಂಚಾಯತ್ ಸದಸ್ಯನೋರ್ವ ಸೂಚನೆ ನೀಡಿದ್ದರೆನ್ನಲಾದ ವಿಡಿಯೋವೊಂದು ವೈರಲ್ ಆಗಿದೆ.
ಗೊಂಡಬಾಳ ಜಿಲ್ಲಾ ಪಂಚಾಯತ್ ಕ್ಷೇತ್ರದ ಕಾಂಗ್ರೆಸ್ ಸದಸ್ಯ ಹಾಗೂ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಆಪ್ತರಾಗಿರುವ ಗೂಳಪ್ಪ ಹಲಗೇರಿ ತಾಲೂಕಿನ ಮೆಳ್ಳಿಕೇರಿ ಗ್ರಾಮದಲ್ಲಿ ಮತದಾರರಿಗೆ 100 ರೂಪಾಯಿ ಹಂಚಿ ಎಂದು ಹೇಳಿದ್ದರು. ಗ್ರಾಮದಲ್ಲಿನ ಕಾಂಗ್ರೆಸ್ ಮುಖಂಡರನ್ನು ಕರೆದು ಹಣ ನೀಡಿದ್ದರು. ಗ್ರಾಮದಲ್ಲಿ 340 ವೋಟ್ಗಳಿದ್ದು, 34,000 ರೂಪಾಯಿ ತಗೊಳ್ಳಿ. ಹಣ ಹಂಚುವವರಿಗೆ 2,000 ಬೇರೆ ಕೊಡುತ್ತೇವೆ ಎಂದು 36,000 ರೂಪಾಯಿ ಹಣದ ಕವರ್ ನೀಡಿದ್ದರು ಎನ್ನಲಾದ ವಿಡಿಯೋ ಚುನಾವಣೆ ಬಳಿ ವೈರಲ್ ಆಗಿದೆ.
ಹಣ ಕೊಟ್ಟಿದ್ದಕ್ಕೆ ಸ್ಥಳೀಯ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು. ನಾವು ಈ ಬಾರಿ ಕಾಂಗ್ರೆಸ್ಗೆ ಮತ ಹಾಕಿಸೋಲ್ಲ. ನೋಟಾಗೆ ಹಾಕಿಸ್ತೇವೆ. ಶಾಸಕರು ಏನೂ ಮಾಡಿಲ್ಲ. ನಾವು ನೋಟಾಗೆ ಹಾಕ್ತೀವಿ ಎಂದು ಸ್ಥಳೀಯರು ತಿರುಗೇಟು ನೀಡಿರುವುದು ವಿಡಿಯೋದಲ್ಲಿದೆ.
ಆದರೆ, ಗೂಳಪ್ಪ ಹಲಗೇರಿ ಅದೆಲ್ಲವನ್ನೂ ಬಿಟ್ಟು ಈ ಬಾರಿ ಒಂದು ಸಲ ಕಾಂಗ್ರೆಸ್ಗೆ ಮತ ಹಾಕಿಸಿ. ಮತದಾರರಿಗೆ ನೂರು ರೂಪಾಯಿ ನೀಟಾಗಿ ಹಂಚಿಕೆ ಮಾಡಿ ಎಂದು ಹೇಳುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.