ಕುಷ್ಟಗಿ(ಕೊಪ್ಪಳ): ಕೇಂದ್ರ ಸರ್ಕಾರ ಮಂಡಿಸಲು ಹೊರಟಿರುವ ಹೊಸ ವಿದ್ಯುತ್ ಮಸೂದೆಯನ್ನ ಕೂಡಲೇ ಹಿಂಪಡೆಯಬೇಕೆಂದು ಕುಷ್ಟಗಿಯ ಕವಿಪ್ರನಿ ನೌಕರರ ಸಂಘ 659 (ಪ್ರಾಥಮಿಕ ಸಮಿತಿ) ನೇತೃತ್ವದಲ್ಲಿ ಜೆಸ್ಕಾಂ ನೌಕರರು ಎಡ ತೋಳಿಗೆ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಮುಷ್ಕರ ನಡೆಸಿದರು.
ಕೇಂದ್ರ ಸರ್ಕಾರ ವಿದ್ಯುತ್ ಮಸೂದೆ (ತಿದ್ದುಪಡಿ), ಖಾಸಗೀಕರಣ ಮಾಡಿ ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಡುವ ಯೋಜನೆ ರೂಪಿಸುತ್ತಿರುವುದು ಖಂಡನೀಯ. ರೈತರು ಬಳಸುವ ವಿದ್ಯುತ್ ರಾಜ್ಯದಲ್ಲಿ ಉಚಿತವಾಗಿದೆ. ಈ ಬದಲಾವಣೆಯಿಂದ ಕಷ್ಟಕ್ಕೀಡಾಗುವ ಪರಿಸ್ಥಿತಿ ಇದೆ. ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಮೊದಲಾದ ಯೋಜನೆಗಳು ಬಂದ್ ಆಗುವ ಸಾಧ್ಯತೆ ಇದೆ ಎಂದು ಕವಿಪ್ರನಿ ನೌಕರರ ಸಂಘ 659 (ಪ್ರಾಥಮಿಕ ಸಮಿತಿ) ಅಧ್ಯಕ್ಷ ಮಹಾಂತೇಶ ನವಲಹಳ್ಳಿ ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕೊರೊನಾ ಆವರಿಸಿ ರೈತರ ಬದುಕು ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಈಗ ಹೊಸ ವಿದ್ಯುತ್ ಮಸೂದೆ ಅಗತ್ಯವಿತ್ತೇ?. ಒಂದು ವೇಳೆ ವಿದ್ಯುತ್ ನೌಕರರ ವಿರೋಧ ಲೆಕ್ಕಿಸದೇ ಈ ಮಸೂದೆ ಜಾರಿಗೊಳಿಸಿದರೆ ವಿದ್ಯುತ್ ಇಲಾಖೆಯು ಕೂಡಾ BSNL ನಂತೆ ಆಗಲಿದೆ ಎಂದು ಕಾರ್ಯದರ್ಶಿ ಅಲ್ತಾಫ್ ಕಳವಳ ವ್ಯಕ್ತಪಡಿಸಿದರು.