ಗಂಗಾವತಿ (ಕೊಪ್ಪಳ): ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಈ ಬಾರಿ ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಜೆಡಿಎಸ್ ಸರ್ಕಾರ ರಚನೆಯಾಗುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ರಾಜ್ಯದ 123 ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕು ಎಂಬ ಉದ್ದೇಶ, ಗುರಿ ಇರಿಸಿಕೊಂಡು ಜೆಡಿಎಸ್ ಕಾರ್ಯತಂತ್ರ ಮಾಡುತ್ತಿದೆ. ಬಿಜೆಪಿ ಅಥವಾ ಕಾಂಗ್ರೆಸ್ಗೆ ಬಹುಮತ ಸಿಗದು. ಹೀಗಾಗಿ ಜೆಡಿಎಸ್ ಮಾತ್ರ ಪರ್ಯಾಯ ರಾಜಕೀಯವಾಗಿ ಬೆಳೆಯುತ್ತಿದೆ. ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಬರುವುದಿಲ್ಲ. ಬದಲಿಗೆ ಜೆಡಿಎಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಕರಡಿ ಬಸವರಾಜ ಸಂಪರ್ಕಿಸಿಲ್ಲ: ಬಿಜೆಪಿ ಟಿಕೆಟ್ ನಿರೀಕ್ಷಿಸುತ್ತಿರುವ ಕೊಪ್ಪಳದ ಹಾಲಿ ಸಂಸದ ಕರಡಿ ಸಂಗಣ್ಣ ಮತ್ತು ಕನಕಗಿರಿಯ ಹಾಲಿ ಬಿಜೆಪಿ ಶಾಸಕ ಬಸವರಾಜ ದಢೇಸ್ಗೂರು ಟಿಕೆಟ್ ತಪ್ಪಿದರೆ ಜೆಡಿಎಸ್ ಸಂಪರ್ಕದಲ್ಲಿರುವುದಾಗಿ ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಯಾರೂ ನನ್ನೊಂದಿಗೆ ಮಾತನಾಡಿಲ್ಲ. ಈ ಬಗ್ಗೆ ಈಗಲೇ ಏನನ್ನೂ ಸ್ಪಷ್ಟವಾಗಿ ಹೇಳಲಾಗದು. ಸಮಯ ಬಂದಾಗ ಏನು ನಿರ್ಧಾರ ಕೈಗೊಳ್ಳಬೇಕೋ ಅದನ್ನು ಆ ಸಮಯದಲ್ಲಿಯೇ ನಿರ್ಣಯ ಮಾಡಬೇಕಿರುತ್ತದೆ. ನಾವು ಅಂದುಕೊಂಡಿದ್ದೆಲ್ಲಾ ನಡೆಯಲ್ಲ. ಆಟವಾಡಿಸುವ ಒಬ್ಬ ದೇವರು ಮೇಲೆ ಕುಳಿತಿದ್ದಾನೆ. ಆತ ಹೇಗೆ ಆಟವಾಡಿಸುತ್ತಾನೋ ಹಾಗೆ ಆಡಬೇಕು. ಎಲ್ಲದಕ್ಕೂ ಆತನೇ ಸೂತ್ರಧಾರಿ ಅಲ್ವಾ ಎಂದು ಕುಮಾರಸ್ವಾಮಿ ಪರೋಕ್ಷವಾಗಿ ಬಿಜೆಪಿ ಅಸಮಾಧಾನಿತರಿಗೆ ಮಣೆ ಹಾಕುವ ಬಗ್ಗೆ ಮಾತನಾಡಿದರು.
ಅಭ್ಯರ್ಥಿ ಘೋಷಣೆ: ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಬಯಸಿ ಒಬ್ಬರು ಬಂದಿದ್ದರು. ಮೊದಲು ಸಂಘಟನೆ ಮಾಡುವಂತೆ ಹೇಳಿ ನಿಯೋಜನೆ ಮಾಡಿ ಕಳಿಸಲಾಗಿತ್ತು. ಆದರೆ ಅವರ ಸಂಘಟನೆ ನನಗೆ ತೃಪ್ತಿ ತಂದಿಲ್ಲ. ಹೀಗಾಗಿ ಬೇರೊಬ್ಬರನ್ನು ಹುಡುಕುತ್ತಿದ್ದೇವೆ. ಸೂಕ್ತ ಅಭ್ಯರ್ಥಿ ಎಂದು ಕಂಡು ಬಂದಲ್ಲಿ ಅಥವಾ ಬೇರೆ ಪಕ್ಷದವರು ನಮ್ಮನ್ನು ಸಂಪರ್ಕಿಸಿದಲ್ಲಿ ಪಕ್ಷದ ಹಿರಿಯರೊಂದಿಗೆ ಕುಳಿತು ಚರ್ಚಿಸಿ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ನಮ್ಮ ಉದ್ದೇಶ ಸ್ವತಂತ್ರವಾಗಿ ಅಧಿಕಾರ ನಡೆಸಬೇಕು ಎಂಬುದಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಅಲ್ಲದೇ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಪಾಡಗುತ್ತಿಗೆ ಅಖ್ತರ್ಸಾಬ ಮತ್ತು ಚನ್ನಕೇಶವ ಅಕಾಂಕ್ಷಿಗಳಾಗಿದ್ದರು. ಈ ಬಗ್ಗೆ ಪರಸ್ಪರ ಚರ್ಚಿಸಿದ ಬಳಿಕ ಚನ್ನಕೇಶವ ಅವರನ್ನು ಜೆಡಿಎಸ್ ಪಕ್ಷದ ಗಂಗಾವತಿ ವಿಧಾನಸಭಾ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಎಂದು ಕುಮಾರಸ್ವಾಮಿ ಘೋಷಣೆ ಮಾಡಿದರು.
ವರುಣಾದಲ್ಲಿ ಜೆಡಿಎಸ್ನಿಂದ ಪ್ರಬಲ ಅಭ್ಯರ್ಥಿ - ಹೆಚ್ಡಿಕೆ: ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಗೆಲವಿಗೆ ಯತ್ನ ಮಾಡುತ್ತಿದೆ. ಹೀಗಾಗಿ ಜೆಡಿಎಸ್ ಪಕ್ಷದಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.
ಬಿಜೆಪಿಯ ಪಟ್ಟಿ ಅಧಿಕೃತ ಘೋಷಣೆಯಾಗಲಿ. ಅಲ್ಲಿ ಯಾವ ವ್ಯಕ್ತಿಗೆ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆಗೆ ಅವಕಾಶ ನೀಡಿದ್ದಾರೆ ಎಂದು ಗಮನಿಸಿ ಜೆಡಿಎಸ್ ಪಕ್ಷದಿಂದ ಪ್ರಬಲ ಅಭ್ಯರ್ಥಿಯನ್ನು ಹಾಕಿ ಸಿದ್ದರಾಮಯ್ಯ ಅವರನ್ನು ಮಣಿಸಲಾಗುವುದು. ಅಮುಲ್ ವಿಚಾರದಲ್ಲಿ ನನ್ನ ಹಾಗೂ ಪಕ್ಷದ ನಿಲುವು ಬದಲಿಯಾಗದು. ಇನ್ನೊಂದು 15 ದಿನ ಸರ್ಕಾರ ಬಿದ್ದು ಹೋಗುತ್ತದೆ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈ ಬಗ್ಗೆ ಸೂಕ್ತ ನಿಲುವು ಕೈಗೊಳ್ಳುತ್ತೇವೆ ಎಂದು ಹೆಚ್ಡಿಕೆ ತಿಳಿಸಿದರು.
ಇದನ್ನೂ ಓದಿ: ನಾಳೆಯಿಂದ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿಯಲಿದ್ದಾರೆ ಹೆಚ್.ಡಿ.ದೇವೇಗೌಡರು