ಗಂಗಾವತಿ(ಕೊಪ್ಪಳ): ಮಾಜಿ ಸಚಿವ ಗಣಿ ಉದ್ಯಮಿ ಜನಾರ್ದನ ರೆಡ್ಡಿ ಅವರ ಟೆಂಪಲ್ ರನ್ ಮುಂದುವರೆದಿದೆ. ಗುರುವಾರ ನಗರದ ಗ್ರಾಮ ದೇವತೆ ದುರ್ಗಾದೇವಿ ದೇವಸ್ಥಾನ ಮತ್ತು ನಗರದ ಆರಾಧ್ಯ ದೈವ ಚನ್ನಬಸವ ಸ್ವಾಮಿ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಮೊದಲಿಗೆ ಚನ್ನಬಸವ ಸ್ವಾಮಿ ಮಠಕ್ಕೆ ಭೇಟಿ ನೀಡಿದ ಅವರು ವಿಶೇಷ ಪೂಜೆ ಸಲ್ಲಿಸಿ, ಚನ್ನಬಸವ ತಾತನ ಗದ್ದುಗೆ ದರ್ಶನ ಪಡೆದರು. ಈ ವೇಳೆ ಮಠದ ವತಿಯಿಂದ ಹಿರಿಯ ಮುಖಂಡ ಹೊಸಹಳ್ಳಿ ಶಂಕರಗೌಡ ರೆಡ್ಡಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಅಲ್ಲಿಂದ ತೆರಳಿದ ರೆಡ್ಡಿ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಈ ವೇಳೆ, ಮಹಿಳೆಯರು ಅವರಿಗೆ ಆರತಿ ಎತ್ತಿ ಸ್ವಾಗತಿಸಿದರು. ದೇಗುಲದ ಸಮಿತಿ ಅಧ್ಯಕ್ಷ ನಾರಾಯಣಪ್ಪ ಹೂವಿನ ಹಾರ ಹಾಕಿ ರೆಡ್ಡಿ ಅವರನ್ನು ಗೌರವಿಸಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಜನಾರ್ದನ ರೆಡ್ಡಿ, ಯಾವುದೇ ರಾಜಕೀಯ ವಿಚಾರ ನಾನು ಮಾತನಾಡಲಾರೆ. ನನ್ನ ಆರಾಧ್ಯ ದೈವ ದುರ್ಗಾದೇವಿಯಾಗಿದ್ದು, ಬಳ್ಳಾರಿ ಮತ್ತು ಗಂಗಾವತಿಯ ಗ್ರಾಮ ದೇವತೆ ದುರ್ಗಮ್ಮಳಾಗಿರುವುದು ಖುಷಿಯ ವಿಚಾರ. ದೇವಸ್ಥಾನದ ಅಭಿವೃದ್ಧಿಗೆ ಸಮಿತಿಯೊಂದಿಗೆ ಸೇರಿ ನಾನು ಶ್ರಮಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ:ಗಂಗಾವತಿ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸುವೆ: ಜನಾರ್ದನ ರೆಡ್ಡಿ ಘೋಷಣೆ