ಗಂಗಾವತಿ(ಕೊಪ್ಪಳ): ದೇಶದಲ್ಲಿಯೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಏನು ಅನ್ನೋದನ್ನು ತೋರಿಸುತ್ತೇನೆ. ನಾನು ಯಾವುದೇ ಪಕ್ಷದ ಬಿ ಟೀಂ ಅಲ್ಲ. ನಾನು ಬಸವಣ್ಣನ ತತ್ವ, ಆದರ್ಶದ ಮೇಲೆ ನಡೆಯುವವನು. ಒಮ್ಮೆ ಮುಂದಿಟ್ಟ ಹೆಜ್ಜೆಯನ್ನು ಹಿಂದಿಡುವವನಲ್ಲ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ಗಂಗಾವತಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷ ಘೋಷಣೆ ನಂತರ ಮೊದಲ ಬಾರಿಗೆ ಕ್ಷೇತ್ರಕ್ಕೆ ಬಂದಿದ್ದೇನೆ. ನಿನ್ನೆಯೇ ಕ್ಷೇತ್ರಕ್ಕೆ ಬರಬೇಕಿತ್ತು, ಆದರೆ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ತೆರಳಿದ್ದರಿಂದ ಬರಲಾಗಲಿಲ್ಲ. ಗಂಗಾವತಿಯ ಜನ ಬಹಳ ಪ್ರೀತಿ ವಿಶ್ವಾಸದಿಂದ ನಮ್ಮ ಪಕ್ಷವನ್ನು ಸ್ವೀಕರಿಸಿದ್ದಾರೆ ಎಂದರು.
ಜನರು ನಾಳೆಯೇ ಏಲೆಕ್ಷನ್ ಇದೆ, ವೋಟ್ ಮಾಡಬೇಕು ಅನ್ನೋ ಧಾವಂತದಲ್ಲಿದ್ದಾರೆ. ನನ್ನ ಹೊಸ ಪಕ್ಷದ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಏನೇ ಮಾತನಾಡಲಿ. ಕೆಆರ್ಪಿಪಿ ಪಕ್ಷ ದೇಶ, ರಾಜ್ಯದಲ್ಲಿ ಏನು ಅನ್ನೋದನ್ನು ಮುಂದೆ ತೋರಿಸಿಕೊಡುತ್ತೇನೆ. ಅವರು ಏನಾದ್ರು ಹೇಳಲಿ, ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಕಾಂಗ್ರೆಸ್, ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟರು. ನಾನು ಯಾವುದೇ ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡಿಲ್ಲ. ಅವರಾಗಿಯೇ ನಮ್ಮ ಪಕ್ಷಕ್ಕೆ ಬಂದರೆ ಪ್ರೀತಿ ವಿಶ್ವಾಸದಿಂದ ಕರೆದುಕೊಳ್ಳುತ್ತೇವೆ. ಜ.16ರ ಬಳಿಕ ಪಕ್ಷದ ಪ್ರಣಾಳಿಕೆ ಹಾಗೂ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡುತ್ತೇವೆ ಎಂದು ಹೇಳಿದರು.
ನಾನು ರಾಜಕೀಯಕ್ಕೆ ಬರಬೇಕೆಂದು ಉದ್ದೇಶ ಇರಿಸಿಕೊಂಡು ಬಂದವನಲ್ಲ: ನಂತರ ಮಾತನಾಡಿದ ಅವರು, ಯಾವತ್ತೂ ನಾನು ರಾಜಕೀಯಕ್ಕೆ ಬರಬೇಕೆಂದು ಉದ್ದೇಶ ಇರಿಸಿಕೊಂಡು ಬಂದವನಲ್ಲ. ನನ್ನ ವಿಚಾರದಲ್ಲಿ ನಾನು ಬಯಸಿದ್ದು ಒಂದು, ಆದರೆ, ವಿಧಿ ಬಗೆದಿದ್ದು ಮತ್ತೊಂದು ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಬೇಸರ ವ್ಯಕ್ತಪಡಿಸಿದರು. ನಗರದ ಉದ್ಯಮಿ ಕೃಷ್ಣ ದಲಬಂಜನ ನಿವಾಸದಲ್ಲಿ ಕ್ಷತ್ರೀಯ ಸಮಾಜದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ನಾನು ಬಾಲ್ಯದಲ್ಲಿ ವ್ಯಾಪಾರ ವಹಿವಾಟು ನಡೆಸುವ ಮೂಲಕ ದೊಡ್ಡ ಉದ್ಯಮಿಯಾಗಿ ದೇಶ ವಿದೇಶದಲ್ಲಿ ಖ್ಯಾತಿ ಗಳಿಸಬೇಕೆಂದು ಗುರಿ ಇರಿಸಿಕೊಂಡವನು. ಆದರೆ ಹಿರಿಯರು ಹೇಳಿದಂತೆ ನಾವು ಬಯಸುವುದು ಒಂದು, ಭಗವಂತ ನಿಶ್ಚಯ ಮಾಡುವುದು ಇನ್ನೊಂದು ಎಂಬುದು ನನ್ನ ವಿಚಾರದಲ್ಲಿ ಸಾಬೀತಾಗಿದೆ ಎಂದರು.
ಬಳ್ಳಾರಿಯ ವಾತಾವರಣ ನನಗೆ ಗಂಗಾವತಿಯಲ್ಲಿ ಸಿಕ್ಕಿದೆ: ನಾನು ಬಳ್ಳಾರಿಯಲ್ಲಿದ್ದರೆ ಇಡೀ ಉತ್ತರ ಕರ್ನಾಟಕದಲ್ಲಿ ಏನೋ ಮಾಡಿ ಬಿಡ್ತೇನೆ ಎಂದು ಭಯಭೀತರಾದವರು ನನ್ನನ್ನು ಬಳ್ಳಾರಿಯಿಂದ ಹೊರಹಾಕಿಲು ನೋಡ್ತಾ ಇದ್ದಾರೆ. ಬಳ್ಳಾರಿಯಿಂದ ಹೊರ ಹಾಕಿದರೆ ಬೆಂಗಳೂರಿಗೆ ಹೋಗಿ ಕೂರುತ್ತೇನೆ ಎಂದು ಬಹಳ ಜನ ಭಾವಿಸಿದ್ದಾರೆ. ನಾನು ಬಳ್ಳಾರಿಯಿಂದ ಬೆಂಗಳೂರಿಗೆ ಹೋಗಬಾರದು ಮತ್ತು ಗಂಗಾವತಿಗೆ ಹೋಗಬೇಕೆಂದು ನಿರ್ಧಾರ ತಳೆದಿದ್ದೆ. ನಾನು ಗದಗ, ಕೋಲಾರ, ರಾಯಚೂರು ಹೋಗಬಹುದಿತ್ತು. ಬೆಂಗಳೂರಿನ ಐದಾರು ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲುವು ಸುಲಭವಾಗಿತ್ತು ಎಂಬ ವಿಚಾರ ನನಗೂ ಗೊತ್ತಿತ್ತು. ಜನರಿಗೂ ಗೊತ್ತು. ಆದರೆ ಬಳ್ಳಾರಿಯ ವಾತಾವರಣ ನನಗೆ ಗಂಗಾವತಿಯಲ್ಲಿ ಸಿಕ್ಕಿದೆ ಎಂದು ಮಾಜಿ ಸಚಿವರು ಹೇಳಿದರು.
ಗಂಗಾವತಿ ಕ್ಷೇತ್ರ ನನಗೆ ರಾಜಕೀಯ ಪುನರ್ಜನ್ಮ ನೀಡಲಿದೆ: ಬೆಂಗಳೂರಿನಲ್ಲಿ ಬಿಸಿಲೇ ಇಲ್ಲ. ಗಂಗಾವತಿಯಲ್ಲಿ ಬಳ್ಳಾರಿಯ ಬಿಸಲಿದೆ. ಈ ಬಿಸಿಲು ನಮಗೆ ಬಿದ್ದರೆ ಮಾತ್ರ ನಾವು ಚುರುಕಾಗುತ್ತೇವೆ. ಗಂಗಾವತಿ ಕ್ಷೇತ್ರ ನನಗೆ ರಾಜಕೀಯ ಪುನರ್ಜನ್ಮ ನೀಡಲಿದ್ದು, ನನಗೆ ಬೆಂಬಲಿಸುವಂತೆ ಜನಾರ್ದನ ರೆಡ್ಡಿ ಮನವಿ ಮಾಡಿದರು. ನನ್ನ ಸ್ಪರ್ಧೆಯ ಬಗ್ಗೆ ವದಂತಿಗಳನ್ನು ಹರಡಲಾಗುತ್ತಿದೆ. ಗದಗದಿಂದ ಸ್ಪರ್ಧಿಸುತ್ತಾರೆ, ಕೋರ್ಟ್ ವಿಚಾರಣೆ ಮುಗಿದ ಬಳಿಕ ಬಳ್ಳಾರಿಗೆ ತೆರಳುತ್ತಾರೆ ಎಂದು ಭಾವಿಸಿದ್ದಾರೆ. ಆದರೆ ನನಗೆ ಕೋರ್ಟ್ ಅನುಮತಿ ನೀಡಿದರೂ ಕೂಡ ರಾಜಕೀಯ, ಚುನಾವಣೆ ವಿಚಾರದಲ್ಲಿ ಜೀವ ಇರುವರೆಗೂ ನಾನು ಗಂಗಾವತಿಯಿಂದಲೇ ರಾಜಕೀಯ ಮಾಡುತ್ತೇನೆ ಎಂದು ಘೋಷಿಸಿದರು.
ಜನವರಿ 16ರ ಬಳಿಕ ಪಕ್ಷದ ಪ್ರಣಾಳಿಕೆ ಮತ್ತು ಅಭ್ಯರ್ಥಿಗಳ ಮೊದಲ ಪಟ್ಟಿಯ ಬಿಡುಗಡೆ: ಈಗಾಗಲೇ ರಾಜಕೀಯವಾಗಿ ಒಂದು ಹೆಜ್ಜೆ ಇಟ್ಟಿದ್ದೇನೆ. ಮತ್ತೆ ಹಿಂದಕ್ಕೆ ಸರಿಯುವ ಪ್ರಶ್ನೆ ಇಲ್ಲ. ಕೆಲವರು ಏನೇ ಮಾತನಾಡಿದರೂ ನಾನು ಮಾತ್ರ ಜನರ ಜೊತೆ ಇರುತ್ತೇನೆ. ಬೆಂಗಳೂರಿಗೆ ಮತ್ತೆ ಹೋಗುವುದು ವಿಧಾನಸಭೆಗೆ ಹೋಗುವ ಸಂದರ್ಭದಲ್ಲಿಯೇ. ಜ.16 ಅಂದರೆ ಸಂಕ್ರಮಣದ ಬಳಿಕ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಪ್ರಣಾಳಿಕೆ ಮತ್ತು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುತ್ತೇನೆ ಎಂದು ಜನಾರ್ದನ ರೆಡ್ಡಿ ಹೇಳಿದರು.
ಬಿಜೆಪಿ, ಕಾಂಗ್ರೆಸ್ ಪಕ್ಷದ ಮುಖಂಡರ ಭೇಟಿ: ನಾನು ಈ ಮೊದಲೇ ಹೇಳಿದಂತೆ ಗಂಗಾವತಿಯಿಂದಲೇ ಸ್ಪರ್ಧಿಸುತ್ತೇನೆ. ಇಲ್ಲಿನ ಜನ ನನಗೆ ಬಹಳ ಪ್ರೀತಿ ತೋರುತ್ತಿದ್ದಾರೆ. ಗಂಗಾವತಿ ಎಂದರೆ ನನಗೆ ಬಳ್ಳಾರಿಯಂತೆ ಭಾಸವಾಗುತ್ತಿದೆ. ಜನ ಚುನಾವಣೆಯ ಕ್ಷಣಕ್ಕೆ ಎದುರು ನೋಡುತ್ತಿದ್ದಾರೆ. ಜನ ನನ್ನ ಮೇಲಿಟ್ಟಿರುವ ವಿಶ್ವಾಸ, ನಿರೀಕ್ಷೆ ಈಡೇರಿಸುವ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ. ನನ್ನ ಮೇಲೆ ಪ್ರೀತಿ ವಿಶ್ವಾಸ ಇಟ್ಟುಕೊಂಡವರು ನನ್ನೊಂದಿಗೆ ಬರುತ್ತಿದ್ದಾರೆ. ನಾನು ಬಿಜೆಪಿ, ಕಾಂಗ್ರೆಸ್ ಪಕ್ಷದ ಮುಖಂಡರನ್ನೂ ಭೇಟಿಯಾಗುತ್ತಿದ್ದೇನೆ. ಅವರು ಪಕ್ಷಕ್ಕೆ ಬರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಬಿಜೆಪಿಗೆ ಮತ್ತೆ ಹೋಗುವುದು ಮುಗಿದ ಅಧ್ಯಾಯ. ಗಂಗಾವತಿಯಿಂದಲೇ ನೆರೆ-ಹೊರೆಯ ಜಿಲ್ಲೆಯಲ್ಲಿ ಪಕ್ಷವನ್ನು ವಿಸ್ತರಿಸಲು ಯತ್ನಿಸುತ್ತಿದ್ದೇನೆ ಎಂದು ಗಾಲಿ ಜನಾರ್ದನ ರೆಡ್ಡಿ ತಿಳಿಸಿದರು.
ನನ್ನ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿಯವರು ಏನೇ ಆರೋಪ ಮಾಡಲಿ. ಆದರೆ ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಾರೆ. ನನ್ನ ಕೆಲಸವಷ್ಟೇ ನನ್ನ ಮುಂದಿರುವ ಗುರಿ. ಮುಂದಿನ ಚುನಾವಣೆಯಲ್ಲಿ ಜನರೇ ಈ ಬಗ್ಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ರೆಡ್ಡಿ ರಾಜಕೀಯಕ್ಕೆ ಶುಭವಾಗಲಿ ಎಂದು ಹರಕೆ ಸಲ್ಲಿಸಿದ ಅಭಿಮಾನಿ...!