ಕುಷ್ಟಗಿ(ಕೊಪ್ಪಳ): ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಡಶೇಸಿ ತೋಟಗಾರಿಕೆ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಓಪಿ-8848 ಸುಧಾರಿತ ಹೊಸ ತಳಿ ಬೆಂಡೆಕಾಯಿ ತರಕಾರಿ ಬೀಜೋತ್ಪಾದನೆಯ ಇಳುವರಿ 5 ಎಕರೆಯಲ್ಲಿ 3 ಟನ್ ಬಂದಿದೆ.
ಇಸ್ರೇಲ್ ಮಾದರಿ ತೋಟಗಾರಿಕೆ ಕ್ಷೇತ್ರಕ್ಕೆ ಕರ್ನಾಟಕ ರಾಜ್ಯ ಬೀಜ ನಿಗಮವು ಬೀಜೋತ್ಪಾದನೆಗಾಗಿ ಸುಧಾರಿತ ಹೊಸ ತಳಿ ಓಪಿ-8848 ಬೆಂಡೆಕಾಯಿ ಬೀಜ ನೀಡಿತ್ತು. 5 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ ಈ ಬೆಳೆ ಸಮೃದ್ಧವಾಗಿ ಬೆಳೆದಿತ್ತು. ಇದೀಗ ಕಟಾವು ಕಾರ್ಯ ಮುಗಿದು ರಾಶಿ ಮಾಡಲಾಗಿದ್ದು, ಬರೋಬ್ಬರಿ 3 ಟನ್ ಇಳುವರಿ ಬಂದಿದೆ. ಬೀಜದ ಪ್ರತೀ ಕಾಳು ಕೂಡ ಉತ್ತಮ ದರ್ಜೆ ಹಾಗೂ ಶೇ. 100ರಷ್ಟು ಮೊಳಕೆಯೊಡೆಯುವ ಪ್ರಮಾಣ ದೃಢವಾಗಿರುವುದು ರಾಜ್ಯ ಬಿತ್ತನೆ ಬೀಜ ನಿಗಮದ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಕುರಿತು ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಆಂಜನೇಯ ದಾಸರ್ ಪ್ರತಿಕ್ರಿಯಿಸಿ, ಬೆಂಡೆಕಾಯಿ ಬೀಜೋತ್ಪಾದನೆ 65 ದಿನಗಳ ಬೆಳೆಯಾಗಿದೆ. ಸಾಮಾನ್ಯವಾಗಿ ಎಕರೆಗೆ ಒಂದೆರಡು ಕ್ವಿಂಟಾಲ್ ಇಳುವರಿ ನಿರೀಕ್ಷಿಸಬಹುದಾಗಿದೆ. ಆದರೆ ಇಲ್ಲಿ ಇಸ್ರೇಲ್ ತಂತ್ರಜ್ಞಾನ ಆಧಾರಿತವಾಗಿ ಬೆಳೆದ ಬೆಂಡೆಕಾಯಿ 5 ಎಕರೆಗೆ 3 ಟನ್ ಬಂದಿರುವುದು ಮಾರುಕಟ್ಟೆಯಲ್ಲಿ ಬೆಂಡೆಕಾಯಿ ಬೀಜ ಗುಣಮಟ್ಟದ ಆಧಾರದಲ್ಲಿ ಪ್ರತಿ ಕ್ವಿಂಟಾಲ್ಗೆ 28 ಸಾವಿರ ರೂ. ಬೆಲೆ ಇದೆ ಎಂದು ಮಾಹಿತಿ ನೀಡಿದ್ದಾರೆ.