ಕೊಪ್ಪಳ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು (ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್) ನ ನೂರಾರು ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಡಳಿತ ಭವನದ ಎದುರು ಕ್ರಾಂತಿ ಗೀತೆಗಳನ್ನು ಹಾಡುವ ಮೂಲಕ ಪ್ರತಿಭಟನೆ ಆರಂಭಿಸಿದ ಪ್ರತಿಭಟನಾಕಾರರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಹಾಕಿದರು. ಕೊರೊನಾ ಸೋಂಕು ಹಾಗೂ ಲಾಕ್ಡೌನ್ ಪರಿಣಾಮದಿಂದ ಕಾರ್ಮಿಕರು, ರೈತರು ಸೇರಿದಂತೆ ಸಾಮಾನ್ಯ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರ ರೈತರ, ಕಾರ್ಮಿಕರ ಹಾಗೂ ಸಾಮಾನ್ಯ ಜನರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ಕಟ್ಟಡ ಕಾರ್ಮಿಕರಿಗೆ ರೇಷನ್ ಕಿಟ್ ನೀಡಬೇಕು ಹಾಗೂ ಪ್ರತಿ ಮಾಹೆ 7,500 ರುಪಾಯಿಯಂತೆ ಮುಂದಿನ 6 ತಿಂಗಳ ಕಾಲದ ಕೋವಿಡ್ ಪರಿಹಾರ ಕೊಡಬೇಕು, ಬಾಕಿ ಇರುವ ಎಲ್ಲ ಕಟ್ಟಡ ಕಾರ್ಮಿಕರ ಅರ್ಜಿ ವಿಲೇವಾರಿ ಮಾಡಬೇಕು. ಅಂಗನವಾಡಿ ಕೇಂದ್ರಗಳ ಬಾಡಿಗೆ, ಮೊಟ್ಟೆ ಬಿಲ್, ಸಿಲಿಂಡರ್ ಹಣ, ಗೌರವಧನ ಪ್ರತಿ ತಿಂಗಳು 5 ನೇ ದಿನಾಂಕದೊಳಗಾಗಿ ಪಾವತಿ ಮಾಡಬೇಕು ಎಂಬ ಬೇಡಿಕೆ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು.