ಕೊಪ್ಪಳ: ಮಲೆನಾಡಿನಲ್ಲಿ ಅಧಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳ ತಾಲೂಕಿನ ಮುನಿರಾಬಾದ್ನಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ತುಂಗಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯ ಭರ್ತಿಯಾಗುತ್ತಿದೆ.
ಜಲಾಶಯದಲ್ಲಿ ಈಗ 1.40 ಲಕ್ಷ ಕ್ಯೂಸೆಕ್ ನೀರಿನ ಒಳಹರಿವಿದೆ. ಇಂದು ಸುಮಾರು 2.11 ಲಕ್ಷ ಕ್ಯೂಸೆಕ್ ನೀರು ಬರುವ ನಿರೀಕ್ಷೆ ಇದೆ. ಒಳ ಹರಿವಿನ ಪ್ರಮಾಣ ಹೀಗೆ ಮುಂದುವರೆದರೆ ತುಂಗಭದ್ರಾ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಎದುರಾಗಲಿದೆ.
ಒಟ್ಟು 100.855 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯವಿರುವ ಜಲಾಶಯದಲ್ಲಿ ಈಗ 82.089 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದಿಂದ ನಾಲೆಗಳಿಗೆ 7,934 ಕ್ಯೂಸೆಕ್ ನೀರು, ನದಿಗೆ 3,500 ಕ್ಯೂಸೆಕ್ ನೀರು ಹರಿ ಬಿಡಲಾಗುತ್ತಿದೆ. ನದಿ ಪಾತ್ರದ ಜನರು ಎಚ್ಚರದಿಂದರಲು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.