ಕುಷ್ಟಗಿ (ಕೊಪ್ಪಳ): ತಾಲೂಕಿನಲ್ಲಿ ಕೆರೆ ತುಂಬುವ ಯೋಜನೆ ಅನುಷ್ಠಾನಗೊಂಡಿರುವ ಹಿನ್ನೆಲೆಯಲ್ಲಿ ಕೆರೆಗಳ ಹೂಳು ತೆಗೆಯುವ ಕೆಲಸ ಸರ್ಕಾರವೇ ಕೈಗೆತ್ತಿಕ್ಕೊಳ್ಳಬೇಕೆಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಒತ್ತಾಯಿಸಿದರು.
ಕುಷ್ಟಗಿ ತಾಲೂಕಿನ ಕಡೇಕೊಪ್ಪ ಕ್ರಾಸ್ ಬಳಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃಧ್ಧಿ ಇಲಾಖೆಯಿಂದ ತಾಲೂಕಿನ ಕೆರೆಗಳಿಗೆ ಕೃಷ್ಣಾ ನದಿಯಿಂದ ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶಿಲಾನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆರೆಗಳ ಹೂಳು ತೆಗೆಯುವುದರಿಂದ ನೀರಿನ ಸಂಗ್ರಹ ಸಾಮಾರ್ಥ್ಯ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಮಾಡಿದ ಮನವಿಗೆ ಸ್ಪಂದಿಸಿದ್ದು, ಕೆರೆ ಹೂಳೆತ್ತುವ ಸಲುವಾಗಿ ಇನ್ನೂ 50 ಕೋಟಿ ರೂ. ಬಿಡುಗಡೆಗೆ ಸಣ್ಣ ನೀರಾವರಿ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ ಅವರಿಗೆ ಸೂಚನೆ ನೀಡಿದ್ದಾರೆ.
ತಾಲೂಕಿನಲ್ಲಿ ಒಟ್ಟು 28 ಕೆರೆಗಳ ತುಂಬುವ ಯೋಜನೆ ಹಮ್ಮಿಕೊಂಡಿದ್ದು, ಈ ಯೋಜನೆ ಮೊದಲೇ ಮಂಜೂರಾಗಿತ್ತು. ಇದಾದ ಮೇಲೆ ಕೃಷ್ಣಾ ಭಾಗ್ಯ ಜಲ ನಿಗಮದಡಿಯಲ್ಲಿ 13 ಕೆರೆಗಳು ಮಂಜೂರಾಗಿದ್ದು, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಈಗಾಗಲೇ ಅಡಿಗಲ್ಲು ಹಾಕಿದ್ದಾರೆ.
ಈ ಯೋಜನೆಯಲ್ಲಿ ಕೆರೆಗಳಾದ ಮೆಣಸಗೇರಾ, ಮೀಯಾಪೂರ, ಹೊಸಳ್ಳಿ, ಹನುಮಸಾಗರ, ಮಾವಿನ ಇಟಗಿ, ಬಾದಮಿನಾಳ, ಜಾಗೀರಗುಡದುರು, ಜಿಮ್ಲಾಪೂರ, ವಿಠ್ಠಲಾಪುರ, ನಾರಿನಾಳ ರಾಯನ ಕೆರೆ, ಮೆಣೆದಾಳ, ರಾಯನಕೆರೆ, ಹುಲಿಯಾಪೂರ, ಪುರಕೆರೆ, ನಿಡಶೇಸಿ ಕೆರೆಗಳನ್ನು ತುಂಬಿಸುವ ಜೊತೆಗೆ ಇನ್ನೂ ಸಣ್ಣ ಕೆರೆಗಳನ್ನು ತುಂಬಿಸಲು ಈಗಾಗಲೇ ಸರ್ಕಾರದ ಅನುಮೋದನೆ ಸಿಕ್ಕಿದೆ ಎಂದರು.
ನಮ್ಮ ತಾಲೂಕಿನಲ್ಲಿ 1200 ಕೋಟಿ ರೂ. ವೆಚ್ಚದಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆ ಅದು ಕೂಡ ಭರದಿಂದ ಸಾಗಿದ್ದು, ವರ್ಷದೊಳಗೆ ಪೂರ್ಣಗೊಂಡು ರೈತರ ಜಮೀನುಗಳಿಗೆ ನೀರು ಸಿಗಲಿದೆ ಎಂದರು.