ಕೊಪ್ಪಳ : ಗಂಗಾವತಿ, ಕೊಪ್ಪಳ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಅಕ್ರಮ ಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ಮುಂದುವರೆದಿದೆ. ಅಕ್ರಮ ಗಣಿಗಾರಿಕೆ ನಡೆಸುವವರು ಕಲ್ಲಿನ ಬೆಟ್ಟಗಳನ್ನು ಕರಗಿಸುತ್ತಿದ್ದಾರೆ. ಅಕ್ರಮ ನಡೆಯುತ್ತಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾತ್ರ ಕಂಡು ಕಾಣದಂತೆ ವರ್ತಿಸುತ್ತಿದೆ.
ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುವವರ ಮೇಲೆ ಪ್ರಭಾವಿಗಳ ಕೃಪಾಕಟಾಕ್ಷವಿದೆ ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿದೆ. ಜಿಲ್ಲೆಯ ಗಂಗಾವತಿ ತಾಲೂಕಿನ ಕಡೇಬಾಗಿಲು ಮಾರ್ಗದಿಂದ ಮಲ್ಲಾಪುರ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ವ್ಯಾಪಕವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇಲ್ಲಿ ಭಾರೀ ಸ್ಫೋಟಕ ವಸ್ತುಗಳ ಬಳಕೆ ಮಾಡಲಾಗುತ್ತಿದೆ. ಪರಿಣಾಮ ಈ ಭಾಗದಲ್ಲಿರುವ ಐತಿಹಾಸಿಕ ದೇವಸ್ಥಾನಗಳಿಗೆ ಹಾಗೂ ಸ್ಮಾರಕಗಳಿಗೆ ಹಾನಿಯುಂಟಾಗಿದೆ.
ಓದಿ : ಕೋಟಿ ಕೋಟಿ ಸುರಿದರೂ ನನೆಗುದಿಗೆ ಬಿದ್ದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ..
ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಗೆ ಬಳಸುವ ಸ್ಫೋಟಕದಿಂದ ವನ್ಯಜೀವಿಗಳು ತಮ್ಮ ಆವಾಸ ಸ್ಥಾನಗಳನ್ನು ಕಳೆದುಕೊಂಡು ನಾಡಿಗೆ ಲಗ್ಗೆಯಿಡುತ್ತಿವೆ. ಹೀಗಾಗಿ, ಜಿಲ್ಲೆಯಲ್ಲಿ ಕರಡಿ ಹಾಗೂ ಚಿರತೆಗಳ ಉಪಟಳ ಹೆಚ್ಚಾಗಿದೆ. ಅಕ್ರಮ ಕಲ್ಲು ಗಣಿಗಾರಿಕೆ ನಡೆಸುವವರಿಗೆ ಜನಪ್ರತಿನಿಧಿಗಳ ಬೆಂಬಲವಿದೆ, ಕೆಲ ಪ್ರಭಾವಿಗಳು ಈ ಅಕ್ರಮ ಚಟುವಟಿಕೆಯ ಹಿಂದಿದ್ದಾರೆ ಎಂದು ಜನರು ಆರೋಪಿಸಿರುವ ಹೋರಾಟಗಾರ ಬಸವರಾಜ ಶೀಲವಂತರ, ಅಕ್ರಮ ನಡೆಸುವವರು ಯಾರೇ ಆಗಿರಲಿ, ಎಷ್ಟೇ ಪ್ರಭಾವಿಗಳಾಗಿರಲಿ ಅವರ ಮೇಲೆ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.