ಗಂಗಾವತಿ: ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯಿತಿಯ ರಂಗಾಪುರ ಗ್ರಾಮದಲ್ಲಿನ ಹೊಟೇಲ್, ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಇದನ್ನು ಕೂಡಲೇ ತಡೆಯುವಂತೆ ಒತ್ತಾಯಿಸಿ ನೂರಾರು ಮಹಿಳೆಯರು ಅಬಕಾರಿ ಇಲಾಖೆಯ ಅಧಿಕಾರಿಳಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ರಂಗಾಪುರದಲ್ಲಿ ಎಗ್ಗಿಲ್ಲದೇ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಹಳ್ಳಿಯ ನೆಮ್ಮದಿಯೇ ಹಾಳಾದಂತಿದೆ. ಕಳೆದ ತಿಂಗಳು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಗ್ರಾಮದ ನಾನಾ ಸ್ವಸಹಾಯ ಗುಂಪಿನ ಮಹಿಳಾ ಸದಸ್ಯೆಯರು, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಗ್ರಾಮಸ್ಥರ ನೆಮ್ಮದಿ ಕಾಪಾಡುವಂತೆ ಅಬಕಾರಿ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳು ಸಣಾಪುರದಿಂದ ಅಕ್ರಮವಾಗಿ ಮದ್ಯ ತಂದು ಮಿತಿಗಿಂತಲೂ ಹೆಚ್ಚು ದಾಸ್ತಾನು ಮಾಡಿ ಹೆಚ್ಚುವರಿ ಹಣಕ್ಕೆ ಮಾರಾಟ ಮಾಡುತ್ತಾರೆ. ಇದರಿಂದ ಗ್ರಾಮದ ಯುವಕರು, ಹಿರಿಯರು ಕೆಲ ಸಂದರ್ಭದಲ್ಲಿ ಮಹಿಳೆಯರೂ ಸಹ ಮದ್ಯದ ಚಟಕ್ಕೆ ಬೀಳುತ್ತಿದ್ದಾರೆ ಎಂದು ಮಹಿಳೆಯರು ದೂರಿನಲ್ಲಿ ವಿವರಿಸಿದ್ದಾರೆ.
ಈ ಅಕ್ರಮ ಮದ್ಯ ಮಾರಾಟವನ್ನು ತಡೆದು, ನಮ್ಮ ಹಳ್ಳಿಯ ಜನರ ನೆಮ್ಮದಿಯಿಂದ ಬದಕುವಂತೆ ಅವಕಾಶ ಕಲ್ಪಿಸಿಕೊಡೊಬೇಕು ಎಂದು ಮಹಿಳೆಯರು ಆಗ್ರಹಿಸಿದ್ದಾರೆ.