ಕೊಪ್ಪಳ: ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವ ಆರ್. ಶಂಕರ್ ಅವರು ಇಂದು ಕೊಪ್ಪಳ ತಾಲೂಕಿನ ಕಾಮನೂರು ಗ್ರಾಮದ ರೈತ ನಾರಾಯಣರಾವ್ ಪೊಲೀಸ್ ಪಾಟೀಲ್ ಅವರ ಸಾವಯವ ಕೃಷಿಯ ಮಾವಿನ ತೋಟಕ್ಕೆ ಭೇಟಿ ನೀಡಿದರು.
ತಮ್ಮ ಪತ್ನಿಯೊಂದಿಗೆ ತೋಟಕ್ಕೆ ಆಗಮಿಸಿದ ಸಚಿವ ಆರ್. ಶಂಕರ್ ಅವರು ಸಾವಯವ ಪದ್ಧತಿ ಮೂಲಕ ಬೆಳೆದ ಮಾವಿನ ಹಣ್ಣಿನ ಮೌಲ್ಯವರ್ಧಿತ ವಿವಿಧ ಪದಾರ್ಥಗಳನ್ನು ಸವಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಸಾವಯವ ಕೃಷಿ ಪದ್ಧತಿಯು ಭೂಮಿಯ ಫಲವತ್ತತೆ ಮತ್ತು ಮನುಷ್ಯನ ಆರೋಗ್ಯಕ್ಕೂ ಉತ್ತಮವಾಗುತ್ತದೆ. ಹೀಗಾಗಿ ಸಾವಯವ ಕೃಷಿಗೆ ರೈತರು ಹೆಚ್ಚಿನ ಒತ್ತು ನೀಡಬೇಕು. ಇದಕ್ಕೆ ತೋಟಗಾರಿಕೆ ಇಲಾಖೆಯಿಂದ ಬೇಕಾಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಮಾವಿನ ಹಣ್ಣುಗಳನ್ನು ಸಾವಯವವಾಗಿ ಕೇವಲ ಈ ತೋಟದ ರೈತ ಮಾತ್ರವಲ್ಲದೆ ಇತರ ಯಾವುದೇ ತೋಟಗಾರಿಕೆ ಬೆಳೆಗಳನ್ನು ಸಾವಯವ ರೀತಿಯಲ್ಲಿ ಉತ್ಪಾದನೆ ಮಾಡಬೇಕು. ಇದು ಸಾವಯವ ಪದ್ಧತಿ ತೋಟವಾಗಿರುವುದರಿಂದ ಇಂದು ಈ ತೋಟಕ್ಕೆ ಭೇಟಿ ನೀಡಿದ್ದೇನೆ ಎಂದು ಸಚಿವರು ಹೇಳಿದರು.
ಬಳಿಕ ತೋಟದ ಮಾಲೀಕ ರೈತ ನಾರಾಯಣರಾವ್ ಪೊಲೀಸ್ ಪಾಟೀಲ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಸಾವಯವ ಕೃಷಿಯನ್ನು ಹೀಗೆ ಮುಂದುವರೆಸುವಂತೆ ಅವರಿಗೆ ಸಲಹೆ ನೀಡಿದರು. ಇದೇ ವೇಳೆ ತೋಟಗಾರಿಕೆ ಇಲಾಖೆಯ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ಮಂಜುನಾಥ ನಾರಾಯಣಪುರ, ಕೊಪ್ಪಳ ಜಿಲ್ಲಾ ಉಪ ನಿರ್ದೇಶಕ ಕೃಷ್ಣ ಉಕುಂದ, ಕೃಷಿ ವಿಜ್ಞಾನಿ ಡಾ.ಶೇಷಗಿರಿ ಗುಬ್ಬಿ, ಡಾ. ಅನುರಾಧ ಗುಬ್ಬಿ, ಅಮರೇಶ ಕರಡಿ ಸೇರಿದಂತೆ ಕಾಮನೂರು ಗ್ರಾಮದ ರೈತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.