ಗಂಗಾವತಿ: ಹಿಂದುತ್ವದ ಅಜೆಂಡಾದೊಂದಿಗೆ ಕಾರ್ಕಳದಿಂದ ಸ್ಪರ್ಧಿಸುವುದಾಗಿ ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೀಡಿರುವ ಹೇಳಿಕೆ ಸ್ವಾಗತಾರ್ಹ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದರು. ತಾಲೂಕಿನ ಶ್ರೀರಾಮನಗರದಲ್ಲಿ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುತಾಲಿಕ್ ಸ್ಪರ್ಧೆಯಿಂದ ಹಿಂದುತ್ವದ ವೋಟ್ ಡಿವೈಡ್ ಆಗಲಿದೆ. ಹಿಂದು ಪರ ರಾಜಕೀಯಕ್ಕೆ ಹಿನ್ನಡೆ ಆಗುವುದು ನಿಜ. ಆದರೆ, ಇದು ಇನ್ನೊಬ್ಬರಿಗೆ ಅನುಕೂಲ ಕಲ್ಪಿಸಿದಂತಾಗಲಿದೆ. ಈ ಬಗ್ಗೆ ಮುತಾಲಿಕ್ ಇನ್ನೊಮ್ಮೆ ಪರಿಶೀಲಿಸಬೇಕು ಎಂದು ಮನವಿ ಮಾಡಿದರು.
ಪ್ರಮೋದ್ ಮುತಾಲಿಕ್ ಎಲ್ಲಾದರೂ ಸ್ಪರ್ಧಿಸಲಿ, ಆದರೆ ಬಿಜೆಪಿ ಅಭ್ಯರ್ಥಿಗಳು ರಾಜ್ಯದ 224 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದ್ದಾರೆ. ಚುನಾವಣೆ ಹತ್ತಿರ ಬಂದಂತೆಲ್ಲಾ ವಾಸ್ತವ ಅರಿವಾಗಲಿದೆ. ಯಾರು ಎಲ್ಲಿ ಸ್ಪರ್ಧಿಸುತ್ತಾರೆ ಎನ್ನುವುದು ಚುನಾವಣೆ ಸಂದರ್ಭದಲ್ಲಿ ಗೊತ್ತಾಗಲಿದೆ ಎಂದು ಸಚಿವರು ಸ್ಪಷ್ಟನೆ ನೀಡಿದರು.
ಕಾಂಗ್ರೆಸ್ ಸರ್ಕಾರದಲ್ಲಿ 18 ಹಿಂದುಗಳ ಹತ್ಯೆ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಒಂದೇ ಒಂದು ಹಿಂದು ಕಾರ್ಯಕರ್ತನ ಕೊಲೆಯಾಗಿದೆ. ಹಿಂದೆ ಸಿದ್ದರಾಮಯ್ಯನ ಕಾಂಗ್ರೆಸ್ ಸರ್ಕಾರದಲ್ಲಿ ಹದಿನೆಂಟು ಜನ ಹಿಂದು ಕಾರ್ಯಕರ್ತರ ಕೊಲೆಗಳು ನಡೆದಿದ್ದವು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ನವರು ಅಲ್ಪಸಂಖ್ಯಾತರನ್ನು ವೋಲೈಸುವ ಧರ್ಮಾಧಾರಿತ ರಾಜಕೀಯಕ್ಕೆ ಬ್ರೇಕ್ ಬೀಳುತ್ತಿದೆ. ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ಜಾರಿಯಾಗಿದೆ. ಹಿಜಾಬ್ ಕುರಿತು ಕಾಯ್ದೆ ರೂಪಿಸಿ ಜಾರಿಗೆ ತರಲು ಬಿಜೆಪಿ ಸರ್ಕಾರ ಪ್ರಯತ್ನಿಸಿದೆ ಎಂದು ಮಾಹಿತಿ ನೀಡಿದರು.
ಮೋದಿ ಇಡೀ ದೇಶದ ನಾಯಕ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಕೇಂದ್ರದಲ್ಲೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಮೋದಿ ಇಡೀ ದೇಶದ ನಾಯಕರು. ಹೀಗಾಗಿ ಅಭಿವೃದ್ಧಿ ವಿಚಾರವಾಗಿ ರಾಜ್ಯಕ್ಕೆ ಒಮ್ಮೆಯಲ್ಲ, ಹತ್ತು ಬಾರಿ ಭೇಟಿ ನೀಡಿದರೂ ತಪ್ಪೇನು ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು. ಮೋದಿ ಪದೇ ಪದೆ ರಾಜ್ಯಕ್ಕೆ ಬರುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸುನೀಲ್ ಕುಮಾರ ಅವರು, ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆ ಮುಗಿಯುವ ಹೊತ್ತಿಗೆ ಮೋದಿ ಇನ್ನು ಹತ್ತು ಬಾರಿಯಾದರೂ ರಾಜ್ಯಕ್ಕೆ ಬಂದು ಹೋಗಲಿದ್ದಾರೆ ಎಂದು ಸಚಿವರು ಹೇಳಿದರು.
ಸಿದ್ದರಾಮಯ್ಯ ಮೊದಲು ತಮ್ಮ ಕ್ಷೇತ್ರ ಹುಡುಕಿಕೊಳ್ಳಲಿ: ಬಿಜೆಪಿಯನ್ನು ಟೀಕೆ ಮಾಡುವುದನ್ನು ಬಿಟ್ಟು ಸಿದ್ದರಾಮಯ್ಯ, ಮೊದಲು ತಮ್ಮ ಕ್ಷೇತ್ರ ಯಾವುದು ಎಂಬುದನ್ನು ಖಚಿತಪಡಿಸಿಕೊಳ್ಳಲಿ. ಆ ನಂತರ ನಮ್ಮ ಪಕ್ಷದ ಬಗ್ಗೆ ಟೀಕೆ ಮಾಡಲಿ. ಮೋದಿ ನಮ್ಮ ಪರಮೋಚ್ಛ ನಾಯಕ. ಅವರು ಚುನಾವಣೆಯ ಉದ್ದೇಶಕ್ಕಾಗಿಯೇ ರಾಜ್ಯಕ್ಕೆ ಬರುತ್ತಿದ್ದಾರೆ. ಅದರಲ್ಲಿ ಏನಿದೆ ತಪ್ಪು..? ಸಚಿವ ಸುನೀಲ್ ಕುಮಾರ್ ಪ್ರಶ್ನಿಸಿದರು.
ಬಿಜೆಪಿಯಿಂದ ರಾಜ್ಯದಲ್ಲಿ ಅಭಿವೃದ್ಧಿ ವೇಗ: ಬೊಮ್ಮಾಯಿ ಮುಖ್ಯಮಂತ್ರಿ ಆದ ನಂತರ ದೊಡ್ಡ ಪ್ರಮಾಣದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಯಾವುದೇ ಕಾಮಗಾರಿಗಳು ಕೇವಲ ಒಂದು ತಿಂಗಳಲ್ಲಿ ಘೋಷಣೆ ಮಾಡಿ ಆರು ತಿಂಗಳಲ್ಲಿ ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ. ಸರ್ಕಾರದ ಆದೇಶವಾಗಬೇಕು, ಅದಕ್ಕೆ ಪೂರಕ ಯೋಜನೆ ಸಿದ್ಧವಾಗಬೇಕು. ಆರ್ಥಿಕ ಇಲಾಖೆ ಅನುಮೋದನೆ, ಅನುಷ್ಠಾನದ ತಾಂತ್ರಿಕ ಸಮಸ್ಯೆ ಹೀಗೆ ಹತ್ತಾರು ಕಾರಣದಿಂದ ಕಾಮಗಾರಿಗಳು ವಿಳಂಬ ಆಗುತ್ತವೆ. ಆದರೆ ಇವೆಲ್ಲರ ನಡುವೆ ರಾಜ್ಯದಲ್ಲಿ ಬಿಜೆಪಿ ಅತ್ಯಂತ ವೇಗವಾಗಿ ಅಭಿವೃದ್ಧಿ ಕಾರ್ಯ ಮಾಡುತ್ತಿದೆ ಎಂದ ತಮ್ಮ ಸರ್ಕಾರವನ್ನು ಸಚಿವರು ಸಮರ್ಥಿಸಿಕೊಂಡರು.
ಇದನ್ನೂಓದಿ:ಬಜೆಟ್ನಲ್ಲಿ ಹಣದುಬ್ಬರ, ಮನರೇಗಾ ಉಲ್ಲೇಖವೇ ಇಲ್ಲ.. ಇದು ಮಿತ್ರರ ಬಜೆಟ್ ಎಂದ ರಾಹುಲ್ ಗಾಂಧಿ