ಕೊಪ್ಪಳ: ರಾಜ್ಯದಲ್ಲಿ ಅಲೆಮಾರಿ ಜನಾಂಗಕ್ಕೆ 2.5 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಈಗಾಗಲೇ 3,500 ಮನೆಯ ಹಕ್ಕು ಪತ್ರಗಳು ಸಿದ್ದಗೊಂಡಿವೆ. ಆದಷ್ಟು ಶೀಘ್ರವೇ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಅಲೆಮಾರಿ ಸಮಾವೇಶ ಹಮ್ಮಿಕೊಂಡು ಹಕ್ಕುಪತ್ರ ವಿತರಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ಜಿಲ್ಲೆಯ ಕುದುರೆಮೋತಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲೆಮಾರಿ ಸಮುದಾಯದವರು ಒಟ್ಟು 10 ಸಾವಿರ ಮನೆಗಳಿಗೆ ಬೇಡಿಕೆ ಇಟ್ಟಿದ್ದಾರೆ. ಹಂತ-ಹಂತವಾಗಿ ಅವರ ಬೇಡಿಕೆ ಈಡೇರಿಸಲಾಗುವುದು. ಅಲ್ಲದೇ, ಅಲೆಮಾರಿ ಮಕ್ಕಳ ಶಿಕ್ಷಣಕ್ಕಾಗಿ ರಾಜ್ಯ ಸರ್ಕಾರದಿಂದ ಆರು ವಸತಿ ಶಾಲೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.
ಸದ್ಯ ಕುದುರೆಮೋತಿ ಗ್ರಾಮದಲ್ಲೂ ಒಂದು ವಸತಿ ಶಾಲೆ ಬೇಕು ಎನ್ನುವ ಬೇಡಿಕೆ ಇದೆ. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಈ ಕುರಿತು ಕ್ರಮ ಕೈಗೊಳ್ಳಲಾಗುವುದು. ವಸತಿ ಶಾಲೆಗಳಲ್ಲಿ ಶೇ.6ರಷ್ಟು ಅಲೆಮಾರಿ ಮಕ್ಕಳಿಗೆ ಮೀಸಲಾತಿ ಕೊಡಲಾಗಿದೆ ಎಂದು ಹೇಳಿದರು.
ವೀರಶೈವ ಜಂಗಮರ ಎಸ್ಸಿ ಮೀಸಲಾತಿ ಬೇಡಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, "ಸರ್ಕಾರದಿಂದ ಅನ್ಯಾಯ ಆಗಿದೆ ಎನ್ನುವುದು ವೀರಶೈವ ಜಂಗಮರ ಭಾವನೆಯಾಗಿದೆ. ಈ ಬಗ್ಗೆ ನಾನೂ ಕೂಡ ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ. ಅಲ್ಲದೇ, ಯಾವುದೇ ಅತೃಪ್ತಿ ಇದ್ದರೂ ಕೂಡ ಮತ್ತೊಮ್ಮೆ ಪರಿಶೀಲನೆ ಮಾಡಿ ಸರಿಪಡಿಸುತ್ತೇವೆ" ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಅನರ್ಹರನ್ನು ಪಟ್ಟಿಗೆ ಸೇರಿಸಿ ಮೀಸಲಾತಿ ದೋಚುವ ಕೆಲಸ ನಡೆಯುತ್ತಿದೆ: ಎಚ್. ವಿಶ್ವನಾಥ