ಕುಷ್ಟಗಿ (ಕೊಪ್ಪಳ): ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವಾ ನಿರತ ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರಿಗೆ ಮನವಿ ಸಲ್ಲಿಸಲಾಯಿತು.
ಕಳೆದ ಶುಕ್ರವಾರದಿಂದ ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿರುವ ಅತಿಥಿ ಉಪನ್ಯಾಸಕರು, ಕಾಲೇಜು ತರಗತಿ ಬಹಿಷ್ಕರಿಸಿ ಪ್ರತಿಭಟನೆ ಮುಂದುವರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಅಮರೇಗೌಡ ಪಾಟೀಲ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು.
ಸೇವಾ ಭದ್ರತೆ ಇಲ್ಲದೆ ಕನಿಷ್ಠ ವೇತನದಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ. ಸಕಾಲಿಕ ವೇತನ ಸಹ ಇಲ್ಲ. ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಅತಿಥಿ ಉಪನ್ಯಾಸಕರ ವಿಷಯ ಪ್ರಸ್ತಾಪಿಸಿ, ಬೇಡಿಕೆ ಈಡೇರಿಸಬೇಕು. ಅತಿಥಿ ಉಪನ್ಯಾಸಕರನ್ನು ಅವೈಜ್ಞಾನಿಕವಾಗಿ ನೇಮಿಸಲಾಗುತ್ತಿದೆ. ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಪಠ್ಯಕ್ರಮ ಅಳವಡಿಸಲಾಗಿದ್ದು, ಪುಸ್ತಕಗಳು ಅಲಭ್ಯವಾಗಿದೆ. ಜೂನ್, ಜುಲೈ ತಿಂಗಳಿನಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಿಸದೇ ಸೆಪ್ಟೆಂಬರ್, ನವೆಂಬರ್ ತಿಂಗಳಿನಲ್ಲಿ ಅವೈಜ್ಞಾನಿಕವಾಗಿ ನೇಮಿಸುತ್ತಿರುವುದು ಎಷ್ಟು ಸರಿ?. ಪ್ರಸಕ್ತ ಅವಧಿಯಲ್ಲಿ ಪಠ್ಯಕ್ರಮ ಹಿಂದುಳಿಯಲು ವಿವಿ ಮಟ್ಟದ ಧೊರಣೆಯೇ ಕಾರಣ ಎಂದು ಅತಿಥಿ ಉಪನ್ಯಾಸಕರು ಆರೋಪಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಬಯ್ಯಾಪೂರ, ಅತಿಥಿ ಉಪನ್ಯಾಸಕರ ಬೇಡಿಕೆ ನ್ಯಾಯಯುತವಾಗಿದ್ದು, ಈ ವಿಷಯ ಸದನದಲ್ಲಿ ಪ್ರಸ್ತಾಪಿಸುವ ಭರವಸೆ ನೀಡಿದರು. ನಂತರ ಅತಿಥಿ ಉಪನ್ಯಾಸಕರು ಇಲ್ಲಿನ ಬುತ್ತಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜಮಾಯಿಸಿ, ಮುಂದಿನ ಹೋರಾಟದ ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು.
ಈ ವೇಳೆ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಶಂಕರ ಅಡವಿಬಾವಿ, ಶಂಕರ ಕರಪಡಿ, ಶಿವರಾಜ ಬಂಡಿಹಾಳ, ಅತಿಥಿ ಉಪನ್ಯಾಸಕರಾದ ಭೀಮಣ್ಣ.ಸಿ, ಫಕೀರಪ್ಪ ತಳವಾರ, ಬಸಯ್ಯ ಮಠಪತಿ, ಡಾ.ಆಯ್.ಎನ್.ಹುರಳಿ, ವಿಶ್ವನಾಥ ತೊಂಡಿಹಾಳ, ರಾಜಶೇಖರ ಕಲಕಬಂಡಿ, ಶಿವಲೀಲಾ ಸಾಲಿಮಠ, ಮಾಲತಿ ದರ್ಮಾಯತ್, ಮಂಜುನಾಥ, ಫೀರಸಾಬ ವೈ.ಎನ್, ರಾಘವೇಂದ್ರ ಆರ್.ಸಿ, ಲಕ್ಷ್ಮಿ ಎಚ್, ಬಸವರಾಜ ಕೋನಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರತಿಭಟನೆಯಲ್ಲಿ ಕುಷ್ಟಗಿ, ತಾವರಗೇರಾ, ಹಿರೇವಂಕಲಕುಂಟ ಅತಿಥಿ ಉಪನ್ಯಾಸಕರು ಪಾಲ್ಗೊಂಡಿದ್ದರು.