ಕುಷ್ಟಗಿ(ಕೊಪ್ಪಳ): ತಾಲೂಕಿನ 36 ಗ್ರಾ.ಪಂ. ನೌಕರರ ಬಾಕಿ ವೇತನ ಹಾಗೂ ಸಕಾಲಿಕವಾಗಿ ಕಾರ್ಮಿಕ ಕಾಯ್ದೆಯನ್ವಯ ಕನಿಷ್ಠ ವೇತನಕ್ಕಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ನೇತೃತ್ವದಲ್ಲಿಂದು ತಾ.ಪಂ. ಇಓ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕು ಪಂಚಾಯತ್ ಆವರಣದಲ್ಲಿ ಪ್ರತಿಭಟನಾನಿರತ ನೌಕರರು, ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ತಾ.ಪಂ. ಇಓ ಕೆ. ತಿಮ್ಮಪ್ಪ ಅವರ ಅನುಪಸ್ಥಿತಿಯಲ್ಲಿ ವ್ಯವಸ್ಥಾಪಕ ವೀರಶಾಂತಯ್ಯ ಹಿರೇಮಠ ಅವರಿಗೆ ಸಲ್ಲಿಸಿದರು.
ಕೊರೊನಾ ಸಂಕಷ್ಟ ಕಾಲದಲ್ಲೂ ಗ್ರಾ.ಪಂ. ನೌಕರರು ಕೊರೊನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಆದರೂ ಸಕಾಲಿಕ ವೇತನ ಇಲ್ಲ. ಕಂಪ್ಯೂಟರ್ ಆಪರೇಟರ್ ಗಳು ನರೇಗಾ, ಪಂಚತಂತ್ರ, ಎಸ್ ಬಿಎಂ, ವಸತಿ ಯೋಜನೆ, ಬಾಪೂಜಿ ಈ ಎಲ್ಲಾ ಕಾರ್ಯ ನಿರ್ವಹಿಸುತ್ತಿದ್ದು, ತಮಗೆ ಬಾಕಿ ವೇತನ ನೀಡದೆ ಸತಾಯಿಸುತ್ತಿದ್ದಾರೆ. 15ನೇ ಹಣಕಾಸಿನ ಯೋಜನೆಯನ್ನು ಗ್ರಾ.ಪಂ. ಸಿಬ್ಬಂದಿ ವೇತನಕ್ಕೆ ಮೀಸಲಿಡಬೇಕು. ನೌಕರರು ಸೇವೆಯಲ್ಲಿರುವ ವೇಳೆ ಮರಣ ಹೊಂದಿದಲ್ಲಿ ಅವರ ಕುಟುಂಬದವರಿಗೆ ಮರಣೋತ್ತರವಾಗಿ ಕೆಲಸ ನೀಡಬೇಕು. ಪ್ರತಿ ದಿನ ಗ್ರಾ.ಪಂ.ಗಳ ರಾಷ್ಟ್ರಧ್ವಜ ಆರೋಹಣ, ಅವರೋಹಣ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಗೌರವಧನ ನೀಡಬೇಕು ಎಂದು ಮನವಿ ಸಲ್ಲಿಸಿದರು.