ಗಂಗಾವತಿ : ಅಂಜನಾದ್ರಿ ದೇಗುಲಕ್ಕೆ ಸಂಬಂಧಿಸಿದಂತೆ ಅನಧಿಕೃತ ಟ್ರಸ್ಟ್ ನಿರ್ಮಿಸಿಕೊಂಡು ದೇಣಿಗೆ ಸಂಗ್ರಹಿಸುವ ಮತ್ತು ಅನಗತ್ಯ ಚರ್ಚೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಹಂಪಿಯ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಕಿಷ್ಕಿಂಧೆಯ ಮಾನವನ್ನು ಬಹಿರಂಗವಾಗಿ ಹರಾಜು ಹಾಕುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಪದ್ಮನಾಭರಾಜು ಆರೋಪಿಸಿದ್ದಾರೆ.
ಕಿಷ್ಕಿಂಧೆಯ ಅಂಜನಾದ್ರಿಯೇ ಹನುಮ ಜನ್ಮಭೂಮಿ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಸಂಬಂಧವೇ ಇಲ್ಲದ ಈ ಸ್ವಾಮೀಜಿ ವಿವಾದಗಳಲ್ಲಿ ಭಾಗಿಯಾಗಿ ಚರ್ಚೆ ಮಾಡುತ್ತಾರೆ. ತಿರುಪತಿಯ ಟಿಟಿಡಿ ಬಳಿಕ ಇದೀಗ ಮಹಾರಾಷ್ಟ್ರದ ಸಂತ ಸಮ್ಮೇಳನದಲ್ಲಿ ಗೋವಿಂದಾನಂದ ಸ್ವಾಮೀಜಿ ಭಾಗವಹಿಸಿ ಸಾಧುಗಳೊಂದಿಗೆ ಜಗಳ ಮಾಡುವ ಹಂತಕ್ಕೆ ಹೋಗಿದ್ದಾರೆ.
ಈ ಮೂಲಕ ನಮ್ಮ ಕಿಷ್ಕಿಂಧೆಯ ಮರ್ಯಾದೆ ಕಡಿಮೆ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಸಾರ್ವಜನಿಕವಾಗಿ ನಡೆಯುವ ಚರ್ಚೆ, ಸಮಾಲೋಚನೆಯಲ್ಲಿ ಕಿಷ್ಕಿಂಧೆಯ ಪರವಾಗಿ ವಾದಿಸಲು ಇವರಿಗೆ ಯಾರು ಅಧಿಕೃತ ಅವಕಾಶ ನೀಡಿದವರು ? ಹನುಮನ ಬಗ್ಗೆ ವಾದಿಸಲಿಕ್ಕೆ ಇವರಿಗೆ ಹಕ್ಕೇನಿದೆ..? ಗೋವಿಂದಾನಂದ ಸರಸ್ವತಿ ಏನಾದರೂ ಕರ್ನಾಟಕ ಸರ್ಕಾರದ ಪ್ರತಿನಿಧಿಯೇ...? ಅವರೇಕೆ ತಿರುಪತಿಯಲ್ಲಿ ಹೋಗಿ ಅಲ್ಲಿನ ಟಿಟಿಡಿಯೊಂದಿಗೆ ವಾಗ್ವಾದ ನಡೆಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಗೋವಿಂದಾನಂದ ಸ್ವಾಮೀಜಿ ಕಿಷ್ಕಿಂಧೆಯ ಶಿಲೆ(ಬಂಡೆ)ಗಳನ್ನು ಅಯೋಧ್ಯೆಗೆ ಕಳಿಸುತ್ತೇನೆಂದು ಟ್ರ್ಯಾಕ್ಟರ್ನಲ್ಲಿ ಮೆರವಣಿಗೆ ಮಾಡಿ ದೇಣಿಗೆ ಸಂಗ್ರಹಿಸಿ ನಿಗೂಢ ಸ್ಥಳಕ್ಕೆ ಹೋಗಿದ್ದಾರೆ. ಅದಲ್ಲದೇ ಕಿಷ್ಕಿಂಧಾ ಪ್ರದೇಶದ ಪ್ರಖ್ಯಾತಿ ಹಾಗೂ ಘನತೆಗೆ ಅಗೌರವ ತರುವಲ್ಲಿ ನಿರತರಾಗಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ಪದ್ಮನಾಭರಾಜು ಒತ್ತಾಯಿಸಿದ್ದಾರೆ.
ಓದಿ : ಇನ್ಸ್ಟಾಗ್ರಾಮ್ ನಲ್ಲಿ Sorry ಅಂತಾ ಬರೆದು ನೇಣು ಬಿಗಿದುಕೊಂಡ ಕಾಲೇಜು ವಿದ್ಯಾರ್ಥಿ