ಕೊಪ್ಪಳ: ನಗರದ ಜೆಸ್ಕಾಂ ಕಚೇರಿ ಆವರಣದಲ್ಲಿ ವಿದ್ಯುತ್ ಪರಿವರ್ತಕ ಇಳಿಸುವಾಗ ಲೈನ್ಮ್ಯಾನ್ ಚೋಳಪ್ಪ ಎಂಬುವರ ಮೇಲೆ ಟಿಸಿ ಬಿದ್ದು ತೀವ್ರ ಗಾಯಗೊಂಡಿದ್ದಾರೆ. ಈ ಅವಘಡಕ್ಕೆ ಸಂಬಂಧಿಸಿದಂತೆ ಗಾಯಾಳು ಹಾಗೂ ಅವರ ಕುಟುಂಬಕ್ಕೆ ಜೆಸ್ಕಾಂ ಸ್ಪಂದಿಸಿದೆ ಎಂದು ಜೆಸ್ಕಾಂನ ಕೊಪ್ಪಳ ವಿಭಾಗದ ಇಇ, ಎಂ.ಎಸ್. ಪತ್ತಾರ ಹೇಳಿದ್ದಾರೆ.
ಲೈನ್ಮ್ಯಾನ್ ಚೋಳಪ್ಪ ಅವರ ಕುಟುಂಬಸ್ಥರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿರುವ ಇಇ (ಕಾರ್ಯನಿರ್ವಾಹಕ ಎಂಜಿನಿಯರ್), ಎಂ.ಎಸ್. ಪತ್ತಾರ, ಕಳೆದ ಎಪ್ರಿಲ್ 27 ರಂದು ನಡೆದಿರುವ ಆ ಘಟನೆ ಆಕಸ್ಮಿಕವಾದದ್ದು. ಕ್ರೇನ್ ಬಳಸಿ ಟಿಸಿಗಳನ್ನು ಕೆಳಗಿಸುವ ಸೌಲಭ್ಯ ಎಲ್ಲ ಕಡೆ ಇಲ್ಲ, ಗಂಗಾವತಿಯಲ್ಲಿ ಮಾತ್ರ ಇದೆ. ಕೊಪ್ಪಳದಲ್ಲಿ ಏನಾದರೂ ಅನಿವಾರ್ಯ ಕೆಲಸವಿದ್ದಾಗ ಅಲ್ಲಿಂದ ಕ್ರೇನ್ ತರಿಸಿಕೊಳ್ತೇವೆ. ಘಟನೆ ನಡೆದ ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದರು.
ಅಲ್ಲದೆ ಘಟನೆ ಕುರಿತಂತೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಇಲ್ಲಿನ ಸೆಕ್ಷನ್ ಅಧಿಕಾರಿ, ಅಕೌಂಟ್ಸ್ ಆಫೀಸರ್ ಸೇರಿದಂತೆ ಎಲ್ಲರೂ ಸ್ಪಂದಿಸಿದ್ದೇವೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಚೋಳಪ್ಪ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿಗೆ ಗಾಯಾಳುವನ್ನು ಕರೆದೊಯ್ದ ಮೇಲೆ ನಾವು ಅಲ್ಲಿಗೆ ಹೋಗಿಲ್ಲ. ಆದರೆ ಮಾನವೀಯತೆಯ ದೃಷ್ಟಿಯಿಂದ ಎಲ್ಲ ಸಹಕಾರ ನೀಡಿದ್ದೇವೆ. ಘಟನೆಯಲ್ಲಿ ತಪ್ಪೆಸಿಗಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಇಇ ಪತ್ತಾರ್ ಭರವಸೆ ನೀಡಿದರು.