ಗಂಗಾವತಿ: ತಾಲೂಕಿನಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಎರಡೂ ಸ್ಥಾನಗಳು ಕಾಂಗ್ರೆಸ್ ಪಾಲಾಗಿವೆ. ಈ ಮೂಲಕ ಆಡಳಿತಾರೂಢ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.
ಅಧ್ಯಕ್ಷೆಯಾಗಿ ಮಾಲಾಶ್ರೀ (19 ಮತ), ಉಪಾಧ್ಯಕ್ಷೆಯಾಗಿ ಸುಧಾ ಸೋಮನಾಥ (20) ಮತ ಪಡೆಯುವ ಮೂಲಕ ಆಯ್ಕೆಯಾದರು. ಬಿಜೆಪಿ ಪಕ್ಷದಿಂದ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸಿದ್ದ, ಜಯಶ್ರೀ ಸಿದ್ದಾಪುರ (18) ಹಾಗೂ ಹೀರಾಬಾಯಿ (17) ಮತಗಳು ಪಡೆದು ಪರಾಭವಗೊಂಡರು.
ಈ ಮೂಲಕ ನಗರಸಭೆಯಲ್ಲಿ ಕಾಂಗ್ರೆಸ್ ಪಾರುಪತ್ಯ ಮುಂದುವರೆದಿದ್ದರೆ, ಒಂದೂವರೆ ದಶಕಗಳ ಬಿಜೆಪಿ ಕನಸು ನುಚ್ಚು ನೂರಾಗಿದೆ. ಚುನಾವಣೆಯ ಬಳಿಕ ಸಹಾಯಕ ಅಧಿಕಾರಿ ನಾರಾಯಣ ಕನಕರೆಡ್ಡಿ ಫಲಿತಾಂಶವನ್ನು ಅಧಿಕೃತವಾಗಿ ಘೋಷಣೆ ಮಾಡಿದರು.