ಗಂಗಾವತಿ: ನಿಷೇಧಿತ ಇಸ್ಲಾಮಿಕ್ ಸ್ಟೇಟ್ ಸಂಘಟನೆ (ಐಸಿಸ್) ಚಟುವಟಿಕೆಯಡಿ ಕೈಜೋಡಿಸಿ ದೇಶ ವಿರೋಧಿ ಕೃತ್ಯದಲ್ಲಿ ಭಾಗಿಯಾಗಿದ್ದವರ ವಿರುದ್ಧ ಶಿವಮೊಗ್ಗದಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಹಣ್ಣಿನ ವ್ಯಾಪಾರಿಯೊಬ್ಬರನ್ನು ತಡರಾತ್ರಿ ಶಿವಮೊಗ್ಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಲ್ಲಿನ ವಿಆರ್ಎಲ್ ಸಮೀಪದ ನಿವಾಸಿ ಶಬ್ಬೀರ್ ಮಂಡಲಗಿರಿ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಶಬ್ಬೀರ್ ಶಿವಮೊಗ್ಗದಲ್ಲಿ ಬಂಧನಕ್ಕೊಳಗಾದ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ಇದ್ದು ಹೆಚ್ಚಿನ ವಿಚಾರಣೆಗಾಗಿ ಮಧ್ಯರಾತ್ರಿ ಯುವಕನ ಮನೆಯ ಮೇಲೆ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.
ಇಲ್ಲಿನ ಬನ್ನಿಗಿಡದ ಕ್ಯಾಂಪಿನಲ್ಲಿರುವ ಸರಕು ಸಾಗಾಣಿಕೆ ಸಂಸ್ಥೆ ವಿಆರ್ಎಲ್ ಕಚೇರಿ ಪಕ್ಕದಲ್ಲಿಯೇ ಶಬ್ಬೀರ್ ಮಂಡಲಗಿರಿಗೆ ಸೇರಿದ ಸಗಟು ಹಣ್ಣಿನ ವ್ಯಾಪಾರಿ ಮಳಿಗೆ ಇದೆ. ಆತ ಇಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದ ಎನ್ನಲಾಗಿದೆ.
ವಶಕ್ಕೆ ತೆಗೆದುಕೊಂಡ ಶಬ್ಬೀರ್ ಅತ್ಯಂತ ಸರಳ ವ್ಯಕ್ತಿಯಾಗಿದ್ದು, ಎಲ್ಲೂ ಹೊರಗೆ ಹೆಚ್ಚಿಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ವ್ಯಕ್ತಿಗತವಾಗಿ ಸೌಮ್ಯಸ್ವಭಾವ ಹೊಂದಿದ್ದ. ಅಲ್ಲದೇ ನೆರೆ ಹೊರೆಯವರೊಂದಿಗೆ ಸೌಜನ್ಯಪೂರಕವಾಗಿಯೇ ಇರುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದನ್ನೂ ಓದಿ: ವಿಡಿಯೋ ನೋಡಿ ಬಾಂಬ್ ತಯಾರಿಕೆ, ತುಂಗಾ ನದಿ ಬಳಿ ಟ್ರಯಲ್ ಬ್ಲಾಸ್ಟ್: ಶಂಕಿತ ಉಗ್ರರ ಸಂಚಿನ ಬಗ್ಗೆ ಶಿವಮೊಗ್ಗ ಎಸ್ಪಿ ಮಾಹಿತಿ
ಏನಿದು ಪ್ರಕರಣ: ನಿಷೇಧಿತ ಭಯೋತ್ಪಾದಕ ಸಂಘಟನೆ ಜೊತೆ ನಂಟು ಹೊಂದಿರುವ ಕಾರಣ ಮೂವರು ಶಂಕಿತರಾದ ಶಿವಮೊಗ್ಗದ ಸಿದ್ದೇಶ್ವರ ನಗರದ ನಿವಾಸಿ ಸಯ್ಯದ್ ಯಾಸೀನ್ (21) ಹಾಗೂ ಮಂಗಳೂರಿನ ಮಾಜ್ ಮುನೀರ್ ಅಹಮ್ಮದ್ (22) ಮತ್ತು ತೀರ್ಥಹಳ್ಳಿ ಸೂಪ್ಪುಗುಡ್ಡೆಯ ನಿವಾಸಿ ಶಾರೀಕ್ ಎಂಬುರನ್ನು ಪೊಲೀಸರು ಬಂಧಿಸಿ, ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ಪೊಲೀಸ್ ಬಂದೋ ಬಸ್ತ್ನಲ್ಲಿ ತಂದೆಯ ಅಂತಿಮ ದರ್ಶನ ಪಡೆದ ಶಂಕಿತ ಉಗ್ರ ಮಾಝ್
ಉಗ್ರ ಸಂಘಟನೆಯಲ್ಲಿ ತೊಡಗಿಕೊಂಡಿರುವ ಆರೋಪ ಮಾತ್ರವಲ್ಲದೇ, ತುಂಗಾ ನದಿ ದಂಡೆಯ ಮೇಲೆ ಬಾಂಬ್ ಟ್ರಯಲ್ ನಡೆಸಿದ್ದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಶಿವಮೊಗ್ಗದ ಎಸ್ಪಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಾಂಬ್ ತಯಾರಿಸಿ ಪ್ರಾಯೋಗಿಕ ಸ್ಫೋಟಕ್ಕೆ ತುಂಗಾ ನದಿ ಬಳಸಿಕೊಂಡ ಶಂಕಿತ ಉಗ್ರರು!