ಗಂಗಾವತಿ: ಮರಳು ಅಕ್ರಮ ಸಾಗಣೆ ಮತ್ತು ಕಲ್ಲು ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡಿರುವ ಆರೋಪದಡಿ ತಹಶೀಲ್ದಾರ್ ಎಂ. ರೇಣುಕಾ ಅವರನ್ನು ಅಮಾನತು ಮಾಡಿ ಕಂದಾಯ ಅಧೀನ ಕಾರ್ಯದರ್ಶಿ ರಶ್ಮಿ ಆದೇಶ ಹೊರಡಿಸಿದ್ದಾರೆ.
ತಾಲೂಕಿನ ಮಲ್ಲಾಪುರ, ಸಂಗಾಪುರ, ಚಿಕ್ಕ ಜಂತಕಲ್ ವ್ಯಾಪ್ತಿಯಲ್ಲಿ ಮರಳು ಸಾಗಣೆ ಮತ್ತು ಕಲ್ಲು ಗಣಿಗಾರಿಕೆ ಹೆಚ್ಚುತ್ತಿದ್ದು, ನಿಯಂತ್ರಿಸುವಲ್ಲಿ ವಿಫಲವಾಗಿದ್ದಾರೆ. ಪ್ರತಿ ಟ್ರ್ಯಾಕ್ಟರ್‌ಗೆ 20 ಸಾವಿರ ರೂ.ನೀಡುವಂತೆ ವ್ಯಕ್ತಿಯೊಬ್ಬರಿಗೆ ಕೇಳಿದ್ದರಲ್ಲದೇ, 5000 ರೂ.ಮುಂಗಡ ಪಡೆದಿರುವ ವಿಡಿಯೋ ವೈರಲ್ ಆಗಿತ್ತು.
ಮರಳು ಅಕ್ರಮ ಸಾಗಣೆಗೆ ನೆರವಾಗಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮತ್ತು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದರಿಂದ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. 2020ರ ಡಿಸೆಂಬರ್‌ನಲ್ಲಿ ಲಂಚ ಕೇಳಿದ ವಿಡಿಯೋ ವೈರಲ್ ಆಗಿದ್ದು, ನಂತರ 6 ವಾರ ಕಡ್ಡಾಯ ರಜೆ ನೀಡಲಾಗಿತ್ತು. ಅವರ ಜಾಗದಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ವರ್ಣಿತ್ ನೇಗಿಯನ್ನು ನಿಯೋಜಿಸಲಾಗಿತ್ತು. ಮಾರ್ಚ್ ಮೊದಲ ವಾರದಲ್ಲಿ ಮರು ನಿಯೋಜನೆಗೊಂಡಿದ್ದರು.
ಓದಿ : ರಸ್ತೆ ಕಾಮಗಾರಿ ಸ್ಥಿತಿಗತಿ: ಕರ್ನಾಟಕದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹೀಗಿದೆ!
ಕಳೆದ ನಾಲ್ಕು ತಿಂಗಳ ಹಿಂದೆ ನಡೆದ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಳ್ಳದಂತೆ ಸರಕಾರದ ಮೇಲೆ ಕೆಲ ಚುನಾಯಿತ ಪ್ರತಿನಿಧಿಗಳು ಇನ್ನಿಲ್ಲದ ಒತ್ತಡ ಹೇರಲು ಯತ್ನಿಸಿದ್ದರು ಎನ್ನಲಾಗಿದೆ.