ಗಂಗಾವತಿ(ಕೊಪ್ಪಳ): ಇತ್ತೀಚೆಗೆ ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ದ್ವಿಚಕ್ರ ವಾಹನಗಳ ಓಡಾಟ ಅಧಿಕವಾಗಿದ್ದು, ಜನರಿಗೆ ಪಾರ್ಕಿಂಗ್ ಸಮಸ್ಯೆಯಾಗುತ್ತಿರುವುದನ್ನು ಮನಗಂಡ ಪೊಲೀಸರು ಸ್ವತಃ ತಾವೇ ಸಾರ್ವಜನಿಕ ವಾಹನಗಳಿಗೆ ಪಾರ್ಕಿಂಗ್ ಸ್ಥಳ ನಿಗದಿ ಮಾಡಿದ್ದಾರೆ.
ಡಿವೈಎಸ್ಪಿ ಚಂದ್ರಶೇಖರ ನೇತೃತ್ವದಲ್ಲಿ ಪೊಲೀಸರು, ಪೊಲೀಸ್ ಠಾಣೆಯ ಸಮುಚ್ಚಯಗಳ ಮುಂದಿರುವ ಜಾಗ ಅತಿಕ್ರಮಣ ಮಾಡಿದ್ದ ಕೆಲ ಗೂಡಂಗಡಿ ತೆರವು ಮಾಡಿ ಸ್ವಚ್ಛ ಮಾಡಿದರು. ಈ ಸಂದರ್ಭದಲ್ಲಿ ನಗರಸಭೆ ಸಿಬ್ಬಂದಿಯೊಂದಿಗೆ ಡಿವೈಎಸ್ಪಿ ಚಂದ್ರಶೇಖರ್ ತಾವೇ ಖುದ್ದು ಸಲಾಕೆ ಹಿಡಿದು ಸ್ವಚ್ಛ ಮಾಡಿದರು. ಅಲ್ಲದೆ ಕಸಕಡ್ಡಿ ಗುಡಿಸಿ ನಗರಸಭೆಯ ಪೌರಕಾರ್ಮಿಕರಿಗೆ ನೆರವಾಗುವ ಮೂಲಕ ಗಮನ ಸೆಳೆದರು.
ಡಾ. ಬಿ.ಆರ್.ಅಂಬೇಡ್ಕರ್ ವೃತ್ತದ ಸುತ್ತಲೂ ಸರ್ಕಾರಿ ಉಪ ವಿಭಾಗ ಆಸ್ಪತ್ರೆ, ಪೊಲೀಸ್ ಠಾಣೆಗಳ ಸಮುಚ್ಚಯ, ನ್ಯಾಯಾಲಯ, ಅಂಚೆ ಕಚೇರಿ, ನಗರಸಭೆ ಹೀಗೆ ಹಲವು ಸರ್ಕಾರಿ ಕಚೇರಿಗಳಿವೆ. ನಿತ್ಯ ನೂರಾರು ಜನ ಆಗಮಿಸುವುದರಿಂದ ದ್ವಿಚಕ್ರ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ಸ್ಥಳ ಇಲ್ಲವಾಗಿತ್ತು. ಸದ್ಯ ಪೊಲೀಸರ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.