ಕೊಪ್ಪಳ: ಜಿಲ್ಲೆಯಲ್ಲಿನ ಪೊಲೀಸ್ ಠಾಣೆಗಳು ಬಿಜೆಪಿ ಕಚೇರಿಗಳಾಗಿವೆ. ಬಿಜೆಪಿ ಕಾರ್ಯಕರ್ತರು ಬೆಳಗ್ಗೆಯಿಂದಲೇ ಪೊಲೀಸ್ ಠಾಣೆಗಳಲ್ಲಿದ್ದು ಮಾಮೂಲಿ ಫಿಕ್ಸ್ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಆರೋಪ ಮಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಟ್ಕಾ, ಇಸ್ಪೀಟ್ ಜೂಜಾಟ, ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೂ ಸೇರಿದಂತೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಅಕ್ರಮಗಳಿಗೆ ಕೇವಲ ಅಧಿಕಾರಿಗಳು ಅಷ್ಟೇ ಅಲ್ಲ, ಜಿಲ್ಲಾ ಉಸ್ತುವಾರಿ ಸಚಿವರೂ ಸಹ ಶಾಮೀಲಾಗಿದ್ದಾರೆ ಎಂಬ ಅನುಮಾನ ನಮಗಿದೆ. ಅಲ್ಲದೆ ಇದಕ್ಕೆ ಬಿಜೆಪಿಯ ಕೆಲ ಶಾಸಕರು ಸಹ ಭಾಗಿಯಾಗಿದ್ದಾರೆ ಎಂಬ ಮಾಹಿತಿ ನನಗೆ ಬರುತ್ತಿದೆ ಎಂದು ಆರೋಪಿಸಿದರು.
ನಾನು ಶಾಸಕ, ಸಚಿವನಾಗಿದ್ದ ಸಂದರ್ಭದಲ್ಲಿ ಇಂತಹ ಅಕ್ರಮಗಳಿಗೆ ಅವಕಾಶ ನೀಡಿರಲಿಲ್ಲ. ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಮಾಮೂಲಿ ಫಿಕ್ಸ್ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಜಿಲ್ಲೆಯಲ್ಲಿ ಆಡಿಯೋವೊಂದು ಬಿಡುಗಡೆಯಾಗಿದೆ. ಆ ಆಡಿಯೋದಲ್ಲಿನ ಸಂಭಾಷಣೆಯಲ್ಲಿ ಬರುವ ರಕ್ತ ಹೀರುವ ಆ ಅಧಿಕಾರಿ ಯಾರು? ಸಭೆ ನಡೆಸಿದ ಡುಮ್ಮ ಯಾರು? ಎಂಬುದನ್ನು ತನಿಖೆಯ ಮೂಲಕ ಹೊರಬರಬೇಕಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.