ಕೊಪ್ಪಳ: ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿಯೂ ಬಿಜೆಪಿಯವರು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ನವರು ಭ್ರಷ್ಟಾಚಾರ ಮಾಡುತ್ತಾರೆ ಎಂದು ಹೇಳುತ್ತಿದ್ದ ಬಿಜೆಪಿಯವರು ಈಗೇಕೆ ಸುಮ್ಮನಿದ್ದಾರೆ? ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಪ್ರಶ್ನಿಸಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಕರಣದಲ್ಲಿ ಭ್ರಷ್ಟಾಚಾರ ನಡೆಸಿರುವ ಗಂಗಾವತಿ ಶಾಸಕರ ಶಾಸಕತ್ವವನ್ನು ರದ್ದುಪಡಿಸಬೇಕು. ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮಕ್ಕಳಿಗೆ, ಗರ್ಭಿಣಿಯರಿಗೆ ನೀಡುವ ಮೊಟ್ಟೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ನಾಚಿಕೆಗೇಡಿನ ಸಂಗತಿ. ಈ ಬಗ್ಗೆ ಜಿಲ್ಲೆಯಲ್ಲಿ ಬಿಜೆಪಿಯ ಯಾವೊಬ್ಬ ಮುಖಂಡರು ಮಾತನಾಡುತ್ತಿಲ್ಲ ಎಂದರು.
ಜಿಲ್ಲೆಯಲ್ಲಿ ಕಾನೂನು ಇದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತಿಲ್ಲ. ಕೊಲೆ ಆರೋಪಿಯ ಮದುವೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅಧಿಕಾರಿಗಳನ್ನು ಕಡ್ಡಾಯ ರಜೆಯ ಮೇಲೆ ತೆರಳುವಂತೆ ಆದೇಶವಾಗಿತ್ತು. ಆದರೆ ಈಗ ಮತ್ತೆ ಆದೇಶವನ್ನು ತೆಗೆದು ಆ ಅಧಿಕಾರಿಯನ್ನು ಅದೇ ಸ್ಥಾನದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಇದಕ್ಕೆ ಶಾಸಕರು, ಸಚಿವರಿದ್ದವರು ಕುಮ್ಮಕ್ಕು ನೀಡಿದ್ದಾರೋ? ಅಥವಾ ಈ ಅಧಿಕಾರಿಗಳು ಮೇಲಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ನೂತನ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆಯುತ್ತೇನೆ. ಏಕೆಂದರೆ ತನಿಖೆಯ ಇನ್ನೂ ಪೂರ್ಣಗೊಂಡಿಲ್ಲ. ಆಗಲೇ ಆ ಅಧಿಕಾರಿಗಳನ್ನು ಅದೇ ಸ್ಥಾನದಲ್ಲಿ ನೇಮಕ ಮಾಡಲಾಗಿದೆ.
ಜಿಲ್ಲೆಯಲ್ಲಿ ಕಾನೂನು ಇಲ್ಲದಂತಾಗಿದೆ. ಪೊಲೀಸ್ ಠಾಣೆಯಲ್ಲಿದ್ದ ಮರಳು ಕಳುವಾಗುತ್ತದೆ. ಅದನ್ನು ಕದ್ದವರು ಯಾರು? ಎಂದರು. ಇನ್ನು ಬೊಮ್ಮಾಯಿ ಒಳ್ಳೆಯ ಮನುಷ್ಯ. ಅವರನ್ನು ಉತ್ತಮ ಆಡಳಿತ ಮಾಡಲು ಬಿಡುವುದಿಲ್ಲ. ಅಧಿಕಾರಕ್ಕೆ ಬಂದಾಗ ಬಿಜೆಪಿಯವರು ಕಚ್ಚಾಡುತ್ತಾರೆ. ಹೀಗಾಗಿ ಈ ಸರ್ಕಾರ ಬಹಳ ದಿನ ನಡೆಯುವುದಿಲ್ಲ ಎಂದು ಶಿವರಾಜ ತಂಗಡಗಿ ಹೇಳಿದರು.