ಗಂಗಾವತಿ: ನಗರದ ಹೊರವಲಯದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯೊಂದು ವಾರ್ಷಿಕೋತ್ಸವದ ಅಂಗವಾಗಿ ಫುಡ್ ಕಾರ್ನಿವೆಲ್ (ಆಹಾರ ಮೇಳ) ಆಯೋಜಿಸಿತ್ತು.
ಆಹಾರ ಮೇಳದಲ್ಲಿ ಸಿದ್ಧ ಆಹಾರ, ಫಾಸ್ಟ್ಫುಡ್ ಮೊದಲಾದ ಪದಾರ್ಥಗಳು ಗಮನ ಸೆಳೆದವು. ಮುಖ್ಯವಾಗಿ ನಗರದ ಸಂಕಲ್ಪ ಕಾಲೇಜಿನ ವಿದ್ಯಾರ್ಥಿನಿಯರು ಆಯೋಜಿಸಿದ್ದ ಉಚಿತ ಮನೋರಂಜನಾ ಸ್ಪರ್ಧೆಯಲ್ಲಿ ಗೆದ್ದವರಿಗೆ ಉಚಿತ ಲಘು ಉಪಹಾರ ನೀಡಿದ್ದು ಗಮನ ಸೆಳೆಯಿತು. ನೈಸರ್ಗಿಕ ಐಸ್ ಕ್ರೀಂ, ಬಿಸಿಬಿಸಿ ಮಿರ್ಚಿ, ಈರುಳ್ಳಿ ಬಜ್ಜಿ ಮೊದಲಾದ ವಸ್ತುಗಳು ಜನರನ್ನು ಆಕರ್ಷಿಸಿದವು. ಸುಮಾರು 30ಕ್ಕೂ ಹೆಚ್ಚು ನಾನಾ ನಮೂನೆಯ ತಿಂಡಿ, ತಿನಿಸಿನ ಮಳಿಗೆಗಳನ್ನು ಹಾಕಲಾಗಿತ್ತು.