ಕುಷ್ಟಗಿ(ಕೊಪ್ಪಳ): ಸರ್ಕಾರದ ಮಹಾತ್ವಾಕಾಂಕ್ಷೆಯ ಅಂತರ್ಜಲ ವೃದ್ಧಿಸುವ ಉದ್ದೇಶದ ಹಿನ್ನೆಲೆಯಲ್ಲಿ 2005-06ರಲ್ಲಿ 34.15 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ತಾಲೂಕಿನ ತಳವಗೇರಾ ಹೊರವಲಯದಲ್ಲಿ ಜಿನುಗು ಕೆರೆ ನಿರ್ಮಿಸಲಾಗಿತ್ತು. 2009 ರಲ್ಲಿ ಅತಿವೃಷ್ಟಿಗೆ ಈ ಕೆರೆಯ ವೇಸ್ಟವೇರ್ ಕೊಚ್ಚಿ ಹೋಗಿದ್ದರಿಂದ ಅಂದಿನಿಂದ ಇಂದಿನವರೆಗೂ ಜಿನುಗು ಕೆರೆಯ ಅಸ್ತಿತ್ವ ಕಳೆದುಕೊಂಡಿದೆ.
16.11 ಎಕರೆ ವಿಸ್ತೀರ್ಣದ ಮುಳಗುಡೆ ಪ್ರದೇಶ ಹೊಂದಿದ 2.3 ಎಂಸಿಎಫ್ ಟಿ ಜಲ ಸಾಂಧ್ರತೆ ಪ್ರದೇಶವಿದ್ದು, 58 ಮೀಟರ್ ಉದ್ದದ ಕೆರೆಯ ಏರಿ (ತಡೆಗೋಡೆ) 4.9 ಮೀಟರ್ ಎತ್ತರ, 2.50 ಮೀಟರ್ ಅಗಲದ ಈ ಕೆರೆಯಲ್ಲಿ ಮುಳ್ಳುಕಂಟಿಗಳು ಆವರಿಸಿದೆ. ಕೆರೆಯ ಪ್ರದೇಶದಲ್ಲಿ ಮರಳು ದಂಧೆ ನಡೆಯುತ್ತಿದ್ದು, ಕೆರೆಯ ಪ್ರದೇಶದಲ್ಲಿ ಮರಳು ಸಂಗ್ರಹಿಸಲಾಗಿದೆ, ಕೆರೆಯ ಪ್ರದೇಶ ಒತ್ತುವರಿಯಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೇ ಈ ಜಿನುಗು ಕೆರೆಯನ್ನು ಕಳಪೆಯಾಗಿ ನಿರ್ಮಿಸಿದ ಗುತ್ತಿಗೆದಾರನ ವಿರುದ್ಧ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸಣ್ಣ ನೀರಾವರಿ ಇಲಾಖೆಯ ಧೋರಣೆ ನಿಜಕ್ಕೂ ಸಾರ್ವಜನಿಕರಲ್ಲಿ ಅಚ್ಚರಿ ತರಿಸಿದೆ.
ಈ ಪ್ರದೇಶದಲ್ಲಿ ನಿರ್ಮಿಸಿದ ಕೆರೆಯ ಹೆಚ್ಚುವರಿ ನೀರು ಹರಿಯುವ ವೇಸ್ಟವೇರ್ ಅವೈಜ್ಞಾನಿಕವಾಗಿದೆ. ಈ ವೇಸ್ಟವೇರ್ ನ ತಳಪಾಯವನ್ನು ಕಳಪೆಯಾಗಿ ನಿರ್ಮಿಸಿದ್ದರಿಂದ 2009ರ ಅತಿವೃಷ್ಟಿಯ ಹಳ್ಳದ ಪ್ರವಾಹದಿಂದ ವೇಸ್ಟವೇರ್ ಕೊಚ್ಚಿಹೋಗಿದೆ. ಅಲ್ಲದೇ ಕೆರೆಯ ಏರಿ (ಬಂಡ್) ತಡೆಗೋಡೆಯ ಕಲ್ಲುಗಳು ಕಳಚಿ ಬಿದ್ದಿದ್ದು, ಇದು ಸಹ ಅಪಾಯದಲ್ಲಿದೆ.
ಕೆರೆ ಇಲ್ಲದೇ ಅಂತರ್ಜಲ ಸಮಸ್ಯೆ ಎದುರಿಸುತ್ತಿರುವ ತಳವಗೇರಾ ಗ್ರಾಮಸ್ಥರಿಗೆ ಕೆರೆ ಪುನರ್ ನಿರ್ಮಾಣ ಬಹುದಿನ ಬೇಡಿಕೆಯಾಗಿದೆ. ಗ್ರಾಮಸ್ಥರ ಬೇಡಿಕೆಗೆ ಸ್ಪಂಧಿಸಿದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಕೆರೆಯ ವೇಸ್ಟ್ ವೇರ್, ಬಂಡ್ ದುರಸ್ಥಿ, ಜಂಗಲ್ ಕಟಿಂಗ್ ಇತ್ಯಾದಿ ಕಾಮಗಾರಿಗೆ 50 ಲಕ್ಷ ರೂ. ಮಂಜೂರಿಗೆ ಪ್ರಯತ್ನಿಸಿದ್ದಾರೆ. ಇದೇ ಡಿಸೆಂಬರ್ ವೇಳೆಗೆ ಟೆಂಡರ್ ಕರೆಯುವ ಹೊತ್ತಿಗೆ ಕೋವಿಡ್ ಅಡ್ಡಿಯಾಗಿದೆ ಎನ್ನುತ್ತಾರೆ ಗ್ರಾಮದ ಡಾ. ಮಲ್ಲಿಕಾರ್ಜುನ ಮೇಟಿ.