ಕೊಪ್ಪಳ: ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಪ್ರಾರಂಭಗೊಂಡಿದ್ದು, ಕುಕನೂರು ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಜಿಂಕೆಗಳ ಹಾವಳಿ ರೈತರಿಗೆ ತಲೆನೋವಾಗಿ ಪರಿಣಮಿಸಿದೆ.
ಜಿಲ್ಲೆಯ ಕೊಪ್ಪಳ ತಾಲೂಕಿನ ಕೆಲಭಾಗ, ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಜಿಂಕೆಗಳು ಜಾಸ್ತಿ ಇವೆ. ಹಿಂಡು ಹಿಂಡಾಗಿ ಬಂದು ಬೆಳೆಗಳನ್ನು ತಿಂದು ಹಾಕುತ್ತಿವೆ. ಕಳೆದ ಕೆಲವು ದಿನಗಳಿಂದ ಮಳೆಯಾಗಿದೆ. ಇದರಿಂದಾಗಿ ಮುಂಗಾರು ಬಿತ್ತನೆ ಚುರುಕುಗೊಂಡಿದೆ. ಅದರಲ್ಲೂ ಕುಕನೂರು ತಾಲೂಕು, ಯಲಬುರ್ಗಾ ತಾಲೂಕಿನ ಎರಿ ಭೂಮಿ ರೈತರು ಬಿತ್ತನೆ ಚುರುಕುಗೊಳಿಸಿದ್ದಾರೆ. ಹೆಸರು, ಶೇಂಗಾ, ಮೆಕ್ಕೆಜೋಳ, ಸೂರ್ಯಕಾಂತಿ, ತೊಗರಿ ಸೇರಿದಂತೆ ಇನ್ನಿತರೆ ಬೆಳೆಗಳ ಬಿತ್ತನೆ ಮಾಡುತ್ತಿದ್ದಾರೆ. ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಜಿಂಕೆಗಳ ಹಾವಳಿಯಿದ್ದು, ರೈತರು ಜಿಂಕೆಗಳ ಹಾವಳಿ ತಪ್ಪಿಸುವಂತೆ ಮನವಿ ಮಾಡುತ್ತಿದ್ದಾರೆ.
ಸಾಲ ಮಾಡಿ ಬೆಳೆ ಬೆಳೆದರೂ ಜಿಂಕೆಗಳ ಪಾಲಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ. ಹೀಗಾಗಿ ಬಿತ್ತನೆ ಮಾಡಬೇಕೋ ಬೇಡವೋ ಎಂದು ತಿಳಿಯದಾಗಿದೆ. ಜಿಂಕೆ ಕಾಟ ತಪ್ಪಿಸಲು ಕೊಪ್ಪಳದಲ್ಲಿ ಜಿಂಕೆ ವನ ನಿರ್ಮಾಣ ಮಾಡಿ ಎಂದು ರೈತ ಮುಖಂಡ ಅಂದಪ್ಪ ರುದ್ರಪ್ಪ ಕೋಳೂರು ಆಗ್ರಹಿಸಿದ್ದಾರೆ.