ಕುಷ್ಟಗಿ: ಪಟ್ಟಣದ ಹೊರವಲಯದಲ್ಲಿರುವ ಆಲಮಟ್ಟಿ ಜಲಾಶಯದಿಂದ ಕುಡತಿನಿ ಸ್ಥಾವರಕ್ಕೆ ಪೈಪ್ಲೈನ್ ಕಾಮಗಾರಿ ನಡೆಸಲು ಬಸಿ ನೀರು ಅಡ್ಡಿಯಾಗಿದ್ದು, ಈ ನೀರು ರೈತರೊಬ್ಬರ ಕಡಲೆ ಬೆಳೆಗೆ ನುಗ್ಗಿದ ಪರಿಣಾಮ ಕಟಾವು ಹಂತದಲ್ಲಿದ್ದ ಬೆಳೆ ನೀರುಪಾಲಾಗಿದೆ.
ಆಲಮಟ್ಟಿ ಜಲಾಶಯದಿಂದ ಕುಷ್ಟಗಿ ಮೂಲಕ ಬಳ್ಳಾರಿ ಜಿಲ್ಲೆಯ ಕುಡತಿನಿ ಉಷ್ಣ ಸ್ಥಾವರಕ್ಕೆ ಪೈಪಲೈನ್ ಕಾಮಗಾರಿ ಕೈಗೊಳ್ಳಲಾಗಿದೆ. ಕುಷ್ಟಗಿ ಸಮೀಪ ಪೈಪ್ಲೈನ್ ಕಾಮಗಾರಿಗೆ ಹಳ್ಳದ ಬಸಿ ನೀರು ಅಡ್ಡಿ ಉಂಟುಮಾಡಿದೆ. ಈ ನೀರನ್ನು ಹೊರ ಹಾಕಿ ಪೈಪ್ಲೈನ್ ಜೋಡಣೆ ಕೆಲಸ ಮುಂದುವರೆಸಲಾಗಿದ್ದು, ಹೊರ ಹಾಕಿದ ಬಸಿ ನೀರು ರೈತ ಗುಂಡಪ್ಪ ಕುರ್ನಾಳ ಅವರ ಜಮೀನಿಗೆ ನುಗ್ಗಿ, ಕಟಾವು ಹಂತದಲ್ಲಿದ್ದ 2 ಎಕರೆ ಕಡಲೆ ಬೆಳೆ ಹಾನಿಯಾಗಿದೆ.
ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಕಾಮಗಾರಿ ತಡೆದು, ಹಾನಿಯಾಗಿರುವ ಬೆಳೆಗೆ ಪರಿಹಾರ ನೀಡಬೇಕೆಂದು ತಿಳಿಸಿದ್ದರೂ, ಕೆಲಸ ನಿಲ್ಲಿಸದೇ ಕಾಮಗಾರಿ ಮುಂದುವರಿಸಿದ್ದಾರೆ. ಈ ನೀರಿನಿಂದಾಗಿ ಜಮೀನು ಕೂಡ ಹಾಳಾಗಿದ್ದು, ನೀರಿನಲ್ಲಿರುವ ಕಡಲೆ ಬೆಳೆ ಕಟಾವು ಮಾಡುವುದು ಕೂಡ ಅಸಾಧ್ಯ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡಬೇಕು ಎಂದು ರೈತ ಗುಂಡಪ್ಪ ಕುರ್ನಾಳ ಆಗ್ರಹಿಸಿದ್ದಾರೆ.