ಕುಷ್ಟಗಿ (ಕೊಪ್ಪಳ): ಸಮಾನ ಕೆಲಸಕ್ಕಾಗಿ ಸಮಾನ ವೇತನ ಹಾಗೂ ಸೇವಾ ಭದ್ರತೆ ಒದಗಿಸುವಂತೆ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಹಾಗು ವೈದ್ಯಕೀಯ ಶಿಕ್ಷಣ ಇಲಾಖೆ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಸೇವಾ ನಿರತ ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸುತ್ತಿರುವ ಈ ಪ್ರತಿಭಟನೆ ಇಂದಿಗೆ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಪ್ರತಿಭಟನಾ ನಿರತ ಸಿಬ್ಬಂದಿ ತಮಟೆ ಬಾರಿಸಿ, ಚಪ್ಪಾಳೆ ಹೊಡೆಯುವುದರೊಂದಿಗೆ ವಿನೂತನವಾಗಿ ಪ್ರತಿಭಟಿಸಿದರು. ಕೊರೊನಾ ವೈರಸ್ ನಿಯಂತ್ರಿಸುವ ಹಿನ್ನೆಲೆ ವಿಷಮ ಪರಿಸ್ಥಿತಿಯಲ್ಲಿ ಜೀವ ಲೆಕ್ಕಿಸದೆ ಕಾರ್ಯನಿರ್ವಹಿಸಿದರೂ ಸರ್ಕಾರ ಇವರ ಸೇವೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ತಮಟೆ ಸದ್ದಿನಿಂದ ನಮ್ಮ ಸಮಸ್ಯೆ ಸರ್ಕಾರಕ್ಕೆ ಕೇಳಿಸಲಿ ಎಂದು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸಂಘಟನಾ ಕಾರ್ಯದರ್ಶಿ ಗವಿಸಿದ್ದಪ್ಪ ಉಪ್ಪಾರ ತಿಳಿಸಿದರು.