ಕೊಪ್ಪಳ : ಜಿಲ್ಲೆಯಲ್ಲಿ ಉತ್ಪಾದನೆಯಾಗುತ್ತಿರುವ ಸುಮಾರು 80 ಸಾವಿರ ಲೀಟರ್ ಆಕ್ಸಿಜೆನ್ ಈಗ ಕೊಪ್ಪಳ ಸೇರಿದಂತೆ ಮೂರ್ನಾಲ್ಕು ಜಿಲ್ಲೆಗಳಿಗೆ ಪೂರೈಕೆಯಾಗುತ್ತಿದೆ.
ಜಿಲ್ಲೆಯ ವಿವಿಧ ಕೈಗಾರಿಕೆಗಳಲ್ಲಿ ನಿತ್ಯವೂ ಸುಮಾರು 80 ಸಾವಿರ ಲೀಟರ್ ದ್ರವ ರೂಪದ ಆಕ್ಸಿಜನ್ ತಯಾರಾಗುತ್ತಿದೆ. ಫ್ರಾಕ್ಸೈರ್ ಸೇರಿದಂತೆ ವಿವಿಧ ಕೈಗಾರಿಕೆಗಳಲ್ಲಿ ದ್ರವರೂಪದ ಆಕ್ಸಿಜನ್ ತಯಾರು ಮಾಡಲಾಗುತ್ತಿದೆ.
ಈ ದ್ರವರೂಪದ ಆಕ್ಸಿಜನ್‌ನ ಅನಿಲರೂಪಕ್ಕೆ ಪರಿವರ್ತಿಸಿ ಗದಗ್ ಆಕ್ಸಿಜನ್ ಎಂಬ ಕಂಪನಿ ಜಿಲ್ಲೆಯ ಆಸ್ಪತ್ರೆ ಸೇರಿದಂತೆ ಹೊರ ಜಿಲ್ಲೆಗಳಿಗೆ ಸರಬರಾಜು ಮಾಡುತ್ತಿದೆ.
ಈ ಹಿಂದೆ ಶೇ.70 ರಷ್ಟು ಆಕ್ಸಿಜನ್‌ನ ಕೈಗಾರಿಕೆಗಳಿಗೆ ಹಾಗೂ ಶೇ.30 ರಷ್ಟು ಆಕ್ಸಿಜನ್‌ನ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಆದರೆ, ಈಗ ಕೊರೊನಾ ಎರಡನೇ ಅಲೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ ಆಸ್ಪತ್ರೆಗಳಗೆ ಸರಬರಾಜು ಮಾಡಲಾಗುತ್ತಿದೆ.
ತಾಲೂಕಿನ ಗಿಣಗೇರಿ ಬಳಿ ಇರುವ ಗದಗ್ ಆಕ್ಸಿಜನ್‌ನಲ್ಲಿ ಪ್ರತಿ ನಿತ್ಯವೂ 600 ಜಂಬೋ ಸಿಲಿಂಡರ್ ಹಾಗೂ 18 ರಿಂದ 20 ಕಂಟೈನರ್‌ಗಳಲ್ಲಿ ಆಕ್ಸಿಜನ್ ಭರ್ತಿ ಮಾಡಿ ಪೂರೈಸಲಾಗುತ್ತದೆ.
ಒಂದು ಸಿಲಿಂಡರ್‌ನಲ್ಲಿ ಸುಮಾರು 7 ಕ್ಯೂಬಿಕ್ ಮೀಟರ್ ಆಕ್ಸಿಜನ್ ಇರುತ್ತದೆ. ಅಂತಹ 600 ಸಿಲಿಂಡರ್‌ಗಳನ್ನು ತುಂಬಿ ಸರಬರಾಜು ಮಾಡಲಾಗುತ್ತಿದೆ.
ಕೊಪ್ಪಳ ಜಿಲ್ಲೆಯಲ್ಲಿ ಆಕ್ಸಿಜನ್‌ಗೆ ಈಗ ಸದ್ಯಕ್ಕೆ ಸಾಮಾನ್ಯ ಬೇಡಿಕೆ ಇದೆ. ಆದರೆ, ಇಲ್ಲಿಂದ ಗದಗ, ಹಾವೇರಿ, ವಿಜಯಪುರ, ಬಳ್ಳಾರಿ ಹಾಗೂ ಸಿಂಧನೂರಿಗೆ ಆಕ್ಸಿಜನ್ ಕಳಿಸುತ್ತೇವೆ.
ಮೊದಲಿಗಿಂತ ಈಗ ಆಕ್ಸಿಜನ್ ಬೇಡಿಕೆ ಹೆಚ್ಚಾಗಿದ್ದು, ಕೈಗಾರಿಕೆಗಳಿಗೆ ಪೂರೈಕೆಯನ್ನು ನಿಲ್ಲಿಸಿ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗುತ್ತಿದೆ ಎನ್ನುತ್ತಾರೆ ಗದಗ್ ಆಕ್ಸಿಜನ್ ಕಂಪೆನಿಯ ಓದುಗೌಡ ಅವರು.