ಗಂಗಾವತಿ: ಜುಲಾಯಿನಗರದ ರಾಯಚೂರು-ಗಂಗಾವತಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಎಂಎಸ್ಐಎಲ್ ಅಂಗಡಿಯಿಂದ ಮದ್ಯ ಖರೀದಿಸುವ ಗ್ರಾಹಕರು ಸಾರ್ವಜನಿಕವಾಗಿ ಮದ್ಯ ಸೇವಿಸುತ್ತಿರುವುದರಿಂದ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ ಎಂಎಸ್ಐಎಲ್ ಮುಖ್ಯ ರಸ್ತೆ ಪಕ್ಕದಲ್ಲಿಯೇ ಮಳಿಗೆ ಆರಂಭಿಸಿ ಮದ್ಯ ಮಾರಾಟ ಮಾಡುತ್ತಿರುವುದು ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಸಮಸ್ಯೆಯಾಗಿದೆ. ಇನ್ನು ಹಗಲು ಹೊತ್ತಲ್ಲಿಯೇ ರಸ್ತೆ ಪಕ್ಕದಲ್ಲಿ ಕೆಲವರು ಕುಡಿದು ತೂರಾಡುತ್ತಾ ರಸ್ತೆಗೆ ಬರುತ್ತಾರೆ. ಇದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯುಂಟಾಗುತ್ತಿದೆ ಎಂಬುದು ಸ್ಥಳೀಯರ ಮಾತು.
ಎಂಎಸ್ಐಎಲ್ನಲ್ಲಿ ಕೇವಲ ಖರೀದಿಸಿ ಮನೆಗೆ ಕೊಂಡೊಯ್ಯಬೇಕು ಎಂಬ ನಿಯಮವಿದೆ. ಆದರೆ ಮದ್ಯವ್ಯಸನಿಗಳು ರಸ್ತೆ ಮಧ್ಯದಲ್ಲಿಯೇ ಮದ್ಯ ಸೇವಿಸಿದರೆ ನಾವೇನು ಮಾಡೋಕೆ ಆಗುತ್ತದೆ ಎಂದು ಎಂಎಸ್ಐಎಲ್ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.