ಕೊಪ್ಪಳ : ಯುವ ಜನಾಂಗದ ಬದುಕನ್ನು ಹಾಳು ಮಾಡುತ್ತಿರುವ ಡ್ರಗ್ಸ್ ದಂಧೆಯನ್ನು ಬುಡ ಸಮೇತ ಕಿತ್ತುಹಾಕಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್ ಪ್ರಮೀಳಾ ನಾಯ್ಡು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಡ್ರಗ್ಸ್ ದಂಧೆ ಬಗ್ಗೆ ಈಗ ಸಿಸಿಬಿ ತನಿಖೆ ನಡೆಸುತ್ತಿದೆ. ಡ್ರಗ್ಸ್ ಬಗ್ಗೆ ನನ್ನ ವಿರೋಧವಿದೆ. ಇದು ಯುವ ಜನಾಂಗವನ್ನು ಹಾಳು ಮಾಡುತ್ತಿದೆ. ಓದಿ ಬದುಕು ಕಟ್ಟಿಕೊಳ್ಳಬೇಕಾದ, ಸಾಧಿಸಬೇಕಾದ ಯುವಕರು ಇದಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ನಟಿ ಸಂಯುಕ್ತಾ ಹೆಗಡೆ ಮೇಲೆ ಕವಿತಾ ರೆಡ್ಡಿ ನೈತಿಕ ಪೊಲೀಸ್ ಗಿರಿ ಮಾಡಿರುವ ವಿಚಾರ ಈಗಾಗಲೇ ಆಯೋಗದ ಗಮನಕ್ಕೆ ಬಂದಿದೆ. ಅವರಿಗೆ ನೋಟಿಸ್ ನೀಡುತ್ತೇವೆ ಎಂದರು. ಕೌಟುಂಬಿಕ ಜಗಳದ ವಿಷಯದಲ್ಲಿ ಗಂಡ-ಹೆಂಡತಿಗೆ ವೈಜ್ಞಾನಿಕ ಕೌನ್ಸಿಲಿಂಗ್ ಮಾಡುವ ಮೂಲಕ ಸರಿದಾರಿಗೆ ತರುವ ಪ್ರಯತ್ನ ಮಾಡುತ್ತೇವೆ. ಸೆಪ್ಟಂಬರ್ 19 ರಂದು ರಾಜ್ಯದ ಎಲ್ಲಾ ನ್ಯಾಯಾಲಯದಲ್ಲಿ ಮಹಿಳೆಯರ ಜೀವನಾಂಶಕ್ಕಾಗಿ ಅದಾಲತ್ ನಡೆಯಲಿದೆ.
ದೇವದಾಸಿ ಮಹಿಳೆಯರು, ತೃತೀಯ ಲಿಂಗಿಗಳು ಹಾಗೂ ಒಂಟಿ ಜೀವನ ಸಾಗಿಸುವ ಸೂರಿಲ್ಲದ ಮಹಿಳೆಯರಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಸೂರು ಕಲ್ಪಿಸುವಂತೆ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ ಎಂದರು. ರಾಜ್ಯದಲ್ಲಿ ಆಯೋಗಕ್ಕೆ ಹೆಚ್ಚಾಗಿ ಕೌಟುಂಬಿಕ ಪ್ರಕರಣಗಳ ದೂರ ಬರುತ್ತವೆ.
ಮಹಿಳೆಯರಿಗೆ ತಂದೆ-ತಾಯಿ ಇರುವುದಿಲ್ಲ, ಅತ್ತೆ ಮಾವಂದಿರಿಂದ ಕಿರುಕುಳ ಮತ್ತು ಮಹಿಳೆಯರ ಮೇಲೆ ಹಲ್ಲೆ ನಡೆಯುತ್ತಿರುತ್ತವೆ. ರಾಜ್ಯದಲ್ಲಿ ಮಾರ್ಚ್ ತಿಂಗಳಿನಿಂದ ಆಗಸ್ಟ್ ತಿಂಗಳವರೆಗೆ ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಕೆಲಸದ ಜಾಗದಲ್ಲಿ ಕಿರುಕುಳ ಹೀಗೆ ಒಟ್ಟು 198 ದೌರ್ಜನ್ಯದ ಬಗ್ಗೆ ದೂರು ಮಹಿಳಾ ಆಯೋಗಕ್ಕೆ ಬಂದಿವೆ ಎಂದರು.