ಕೊಪ್ಪಳ: ಸಮಾಜಕ್ಕೆ ಏನಾದರೂ ಒಳ್ಳೆಯ ಸ್ಮರಣೀಯ ಕಾರ್ಯ ಮಾಡಬೇಕು ಎಂಬ ಬಲವಾದ ಇಚ್ಛಾಶಕ್ತಿ ಇದ್ದರೆ ಒತ್ತಡದ ನಡುವೆಯೂ ಒಂದೊಳ್ಳೆ ಕೆಲಸ ಮಾಡಬಹುದು. ಅದಕ್ಕೆ ತಾಜಾ ಉದಾಹರಣೆ ತಾಲೂಕಿನ ಬಸಾಪುರ ಗ್ರಾಮದ ಬಳಿಯ ಪೊಲೀಸ್ ಸಿಬ್ಬಂದಿ ವಸತಿ ಸಮುಚ್ಛಯದ ಬಳಿ ನಿರ್ಮಾಣವಾಗಿರುವ ಕೆರೆ.
ಹೌದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ ಅವರ ವೈಯಕ್ತಿಕ ಕಾಳಜಿ, ಪ್ರಬಲ ಇಚ್ಛಾಶಕ್ತಿಯಿಂದ ಕೇವಲ ಎರಡೂವರೆ ತಿಂಗಳಲ್ಲಿ ಕೆರೆ ನಿರ್ಮಾಣವಾಗಿದ್ದು, ಈಗಾಗಲೇ 10 ಅಡಿ ನೀರು ಹರಿದು ಬಂದಿದೆ.
ತಾಲೂಕಿನ ಬಸಾಪುರ ಗ್ರಾಮದ ಬಳಿ ಇರುವ ಪೊಲೀಸ್ ಸಿಬ್ಬಂದಿ ಸಮುಚ್ಛಯದ ಬಳಿಯ ವಾತಾವರಣ ಈಗ ಬಹುತೇಕ ಬದಲಾಗಿದೆ. ಇದಕ್ಕೆ ಕಾರಣವಾಗಿರೋದು ಅಲ್ಲಿ ಎರಡು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕೆರೆ. ಎಸ್ಪಿ ಟಿ. ಶ್ರೀಧರ್ ಅವರ ಇಚ್ಛಾಶಕ್ತಿಯಿಂದ ಕೆರೆ ನಿರ್ಮಾಣವಾಗಿದೆ. ಗವಿಮಠದ ಶ್ರೀಗಳು ಕೈಗೊಂಡಿದ್ದ ಕೆರೆ ಪುನಶ್ಚೇತನ ಕಾರ್ಯಕ್ರಮದಿಂದ ಪ್ರೇರಣೆಗೊಂಡು ಕೆರೆ ನಿರ್ಮಾಣಕ್ಕೆ ಕಳೆದ ಮಾರ್ಚ್- ಏಪ್ರಿಲ್ ನಲ್ಲಿ ಬಸಾಪುರ ಬಳಿಯ ಪೊಲೀಸ್ ಸಿಬ್ಬಂದಿ ವಸತಿ ಸಮುಚ್ಛಯದ ಬಳಿ ಎರಡು ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಾಣಕ್ಕೆ ಶುರು ಮಾಡಿದ್ದರು. ಎರಡೂವರೆ ತಿಂಗಳಲ್ಲಿ ಸುಮಾರು 25 ಅಡಿ ಆಳದ ಕೆರೆ ನಿರ್ಮಾಣವಾಗಿದೆ.
ಬೋರ್ವೆಲ್ಗಳು ರಿಚಾರ್ಜ್: ಪೊಲೀಸ್ ಸಿಬ್ಬಂದಿ ಶ್ರಮದಾನದ ಜೊತೆಗೆ ಕೆರೆ ನಿರ್ಮಾಣ ಕಾರ್ಯ ಈಗ ಬಹುತೇಕ ಪೂರ್ಣವಾಗಿದ್ದು, ಇತ್ತೀಚಿಗೆ ಸುರಿದ ಮಳೆಯಿಂದಾಗಿ ಕೆರೆಗೆ ಸುಮಾರು 10 ಅಡಿಯಷ್ಟು ನೀರು ಹರಿದು ಬಂದಿದೆ. ಇದರಿಂದಾಗಿ ಸಾರ್ಥಕತೆಯ ಭಾವ ಎಸ್ಪಿಯವರಲ್ಲಿ ಮೂಡಿದೆ. ಕೆರೆಯಲ್ಲಿ ಈಗ ಸುಮಾರು 10 ಅಡಿಯಷ್ಟು ನೀರು ಹರಿದು ಬಂದಿರುವುದರಿಂದ ಸುತ್ತಮುತ್ತಲಿನ ಜಮೀನಿನ ರೈತರಿಗೂ ಸಾಕಷ್ಟು ಅನುಕೂಲವಾಗುತ್ತಿದೆ. ಕೆರೆಯ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಾಗುತ್ತಿದ್ದು, ಬೋರ್ವೆಲ್ಗಳ ಅಂತರ್ಜಲ ಮಟ್ಟ ಹೆಚ್ಚಾಗಿದೆ ಎಂದು ಖುಷಿ ವ್ಯಕ್ತಪಡಿಸುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್.
ಎಸ್ಪಿ ಕಾಳಜಿಯಿಂದ ಕೆರೆ ನಿರ್ಮಾಣ: ಈ ಪೊಲೀಸ್ ಸಿಬ್ಬಂದಿ ವಸತಿ ಸಮುಚ್ಛಯದಲ್ಲಿ ಒಟ್ಟು 120 ಮನೆಗಳಿವೆ. ಇಲ್ಲಿ ವಾಸಕ್ಕೆ ಬರಲು ಸಿಬ್ಬಂದಿ ಮೊದಲು ಹಿಂದೇಟು ಹಾಕುತ್ತಿದ್ದರು. ನೀರಿನ ಸಮಸ್ಯೆ ಸೇರಿದಂತೆ ಇನ್ನಿತರೆ ಕಾರಣಗಳಿಂದ ಇಲ್ಲಿಗೆ ಸಿಬ್ಬಂದಿ ವಾಸಕ್ಕೆ ಬರುತ್ತಿರಲಿಲ್ಲ. ಈಗ ಎಸ್ಪಿ ಅವರು ಕಾಳಜಿಯಿಂದ ಕೆರೆ ನಿರ್ಮಾಣ ಸೇರಿದಂತೆ ಇಲ್ಲಿನ ವಾತಾವರಣವೇ ಸಂಪೂರ್ಣ ಬದಲಾಗುತ್ತಿದೆ. ಹೀಗಾಗಿ ಇಲ್ಲಿ ವಾಸಕ್ಕೆ ಸಿಬ್ಬಂದಿ ಬರುತ್ತಿದ್ದಾರೆ. ಈಗ ಇಲ್ಲಿ ಸುಮಾರು ನೂರು ಕುಟುಂಬಗಳು ವಾಸವಾಗಿವೆ. ಇಲ್ಲಿನ ಸಂಪೂರ್ಣ ವಾತಾವರಣವೇ ಬದಲಾಗಿರುವುದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಡಿರುವ ಈ ಒಳ್ಳೆಯ ಕೆಲಸವೇ ಕಾರಣ ಎಂದು ಸಿಬ್ಬಂದಿ ಖುಷಿ ವ್ಯಕ್ತಪಡಿಸುತ್ತಾರೆ.
ಓದಿ: ಕೃಷ್ಣಾ ನದಿ ಪಾಲಾದ ನಾಲ್ವರು ಸಹೋದರರು: ಶೋಧ ಕಾರ್ಯಕ್ಕೆ ಸ್ಕೂಬಾ ಡೈವಿಂಗ್ ತಂಡ ಸಾಥ್