ಕುಷ್ಟಗಿ(ಕೊಪ್ಪಳ) : ಕುಷ್ಟಗಿ ಪಟ್ಟಣದ 21ನೇ ವಾರ್ಡ್‌ನ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರಿಗೆ ಹಾಗೂ ಅಪೌಷ್ಠಿಕಾಂಶದಿಂದ ಬಳಲುವ ಮಕ್ಕಳಿಗೆ ಕೊಳೆತ ಮೊಟ್ಟೆಗಳನ್ನು ವಿತರಿಸುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಬೆಳಗ್ಗೆ ಫಲಾನುಭವಿಯೊಬ್ಬರಿಗೆ ವಿತರಿಸಿದ ಮೊಟ್ಟೆ ಒಡೆದಾಗ ಕೊಳೆತಿರುವುದು ಗೊತ್ತಾಗಿ ಸಾರ್ವಜನಿಕರು ಅಂಗನವಾಡಿ ಕೇಂದ್ರಕ್ಕೆ ಮುತ್ತಿಗೆ ಹಾಕಿ ಕಾರ್ಯಕರ್ತೆಯನ್ನು ವಿಚಾರಿಸಿದ್ದಾರೆ. ಕೇಂದ್ರದಲ್ಲಿದ್ದ ಉಳಿದ ಮೊಟ್ಟೆಗಳನ್ನು ಪರಿಶೀಲಿಸಿದಾಗಲೂ ಕೊಳೆತ ಮೊಟ್ಟೆಯ ಅಸಲಿಯತ್ತು ಬೆಳಕಿಗೆ ಬಂದಿದೆ. ಇಂತಹ ಮೊಟ್ಟೆಗಳನ್ನು ಹೇಗೆ ತಿನ್ನುವುದು? ಆರೋಗ್ಯದಲ್ಲಿ ವ್ಯತ್ಯಾಸವಾದ್ರೆ ಯಾರು ಹೊಣೆ? ಎಂದು ಸಿಬ್ಬಂದಿಯನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನೂ ವಿಷಯ ತಿಳಿಯುತ್ತಿದ್ದಂತೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು ಅಂಗನವಾಡಿ ಕೇಂದ್ರಕ್ಕೆ ಆಗಮಿಸಿ ಪರಿಶೀಲಿಸಿದರು. ಸಿಡಿಪಿಒ ಜಯಶ್ರೀ ಅವರಿಗೆ ಕೂಡಲೇ ಭೇಟಿ ನೀಡಿ ವಾಸ್ತಾವಾಂಶದ ವರದಿ ನೀಡುವಂತೆ ಸೂಚಿಸಿದರು. ನಂತರ ಆಗಮಿಸಿದ ಸಿಡಿಪಿಒ ಜಯಶ್ರೀ ಅವರು, ಮೊಟ್ಟೆಯ ಗುಣಮಟ್ಟ ಪರಿಶೀಲಿಸದೇ ಮೊಟ್ಟೆ ವಿತರಿಸಿರುವುದಕ್ಕೆ ಅಂಗನವಾಡಿ ಕಾರ್ಯಕರ್ತೆ ಜುಬೇದಾ ಬೇಗಂ ಅವರಿಗೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಅವರು ಬಾಲ ವಿಕಾಸ ಅಂಗನವಾಡಿ ಮೇಲ್ವಿಚಾರಣಾ ಸಮಿತಿ ಹಾಗೂ ದೀರ್ಘ ಕಾಲದ ಫಲಾನುಭವಿಯೊಬ್ಬರ ಜಂಟಿ ಖಾತೆಗೆ ಮೊಟ್ಟೆಯ ಮೊತ್ತವನ್ನು ಜಮಾ ಮಾಡಲಾಗುತ್ತದೆ. ಸಮಿತಿಯಿಂದ ಗುಣಮಟ್ಟದ ಮೊಟ್ಟೆ ಖರೀದಿಸಿ ಅರ್ಹ ಫಲಾನುಭವಿಗಳಿಗೆ ವಿತರಿಸಬೇಕು. ಇದಕ್ಕೆ ಪ್ರತ್ಯೇಕ ಏಜೆನ್ಸಿ ಇಲ್ಲ ಎಂದು ಸ್ಪಷ್ಟಪಡಿಸಿದರು.