ಕೊಪ್ಪಳ: ಹಲವು ರೋಗಗಳನ್ನು ವಾಸಿ ಮಾಡುವ ಔಷಧೀಯ ಗುಣ ಹೊಂದಿರುವ ಬೇವಿನ ಮರಗಳಿಗೂ ರೋಗ ವಕ್ಕರಿಸಿದೆ. ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಲಕ್ಷಾಂತರ ಬೇವಿನ ಮರಗಳು ಇದ್ದಕ್ಕಿದ್ದಂತೆ ಒಣಗಲಾರಂಭಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಸಾಮಾನ್ಯವಾಗಿ ಬೇರೆ ಬೆಳೆಗಳಿಗೆ ಬರುವ ನೆತ್ತಿಸುಳಿ ರೋಗದ ರೀತಿಯಲ್ಲೇ ಬೇವಿನ ಮರಗಳು ಒಣಗಲಾರಂಭಿಸಿವೆ. ಇದು ಅರಣ್ಯ ಇಲಾಖೆಯನ್ನೂ ಕೂಡ ಚಿಂತೆಗೀಡು ಮಾಡಿದೆ.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೊಪ್ಪಳ ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ, ಕೃಷಿ ವಿಜ್ಞಾನಿ ಡಾ. ಎಂ.ಬಿ. ಪಾಟೀಲ್ ಈ ಕುರಿತಂತೆ ಮಾತನಾಡಿ, ಬೇವಿನಮರಗಳಿಗೆ ಡೈಬ್ಯಾಕ್ ರೋಗ ಕಾಣಿಸಿಕೊಂಡಿರುವುದೇ ಮರಗಳು ಒಣಗುವುದಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ. ಹವಾಮಾನ ವೈಪರೀತ್ಯ ಹಾಗೂ ಸೈಕ್ಲೋನ್ ಹಿನ್ನೆಲೆ ಸುರಿದ ಮಳೆಯಿಂದಾಗಿ ಬೇವಿನಮರಗಳಿಗೆ ಇಂತಹ ಸಮಸ್ಯೆ ಕಾಡುತ್ತದೆ. ಆದ್ರೆ ಡೈಬ್ಯಾಕ್ ರೋಗವನ್ನು ನಿಯಂತ್ರಣ ಮಾಡಬಹುದು ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: ರಾಜಕೀಯ ಕಾರಣಕ್ಕೆ ಬಂದ್ ಮಾಡುವುದು ಸರಿಯಲ್ಲ; ಕಾಂಗ್ರೆಸ್ ಮುಳುಗುತ್ತಿರೋ ಹಡಗು ಎಂದ ಸಿಎಂ
ಈ ರೋಗ ನಿಯಂತ್ರಿಸಲು ಶಿಲೀಂದ್ರ ನಾಶಕಗಳನ್ನು ಬಳಸಬೇಕು. ಇಲ್ಲವೆ ಒಣಗಿರುವ ಗಿಡದ ಭಾಗವನ್ನು ಕತ್ತರಿಸಿ ಅದನ್ನು ಸುಟ್ಟು ಹಾಕಬೇಕು. ಅಲ್ಲದೇ, ಕತ್ತರಿಸಿದ ಗಿಡದ ಭಾಗಕ್ಕೆ ಸಗಣಿಯನ್ನು ಹಚ್ಚಬೇಕು. ಒಣಗಿದ ಗಿಡದ ಭಾಗಗಳನ್ನು ಕತ್ತರಿಸಿ ಎಲ್ಲೆಂದರಲ್ಲಿ ಎಸೆಯಬಾರದು. ಹೀಗೆ ಎಸೆಯುವುದರಿಂದ ಮತ್ತೆ ರೋಗ ಹರಡುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.