ಕುಷ್ಟಗಿ(ಕೊಪ್ಪಳ): ತಾಲೂಕಿನ ಜಾಗೀರ ರಾಂಪೂರ ಗ್ರಾಮದ ರೈತರಾದ ಗುರಪ್ಪ, ಶಶಿಧರ ಅವರ ತೊಗರಿ ಬೆಳೆಯಲ್ಲಿ ಗೊಡ್ಡು ರೋಗ ಕಾಣಿಸಿಕೊಂಡ ಹಿನ್ನೆಲೆ, ಕೊಪ್ಪಳ ಕೃಷಿ ವಿಸ್ತರಣಾ ಕೇಂದ್ರದ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲಿಸಿ, ರೈತರಿಗೆ ನಿಯಂತ್ರಣ ಕ್ರಮಗಳ ಬಗ್ಗೆ ಸಲಹೆ ನೀಡಿದರು.
ತೊಗರಿ ಬೆಳೆಗೆ ಬಂದಿರುವ ಗೊಡ್ಡು ರೋಗ ಬಹು ಬೇಗನೆ ಹರಡುವ ವೈರಸ್ ಆಗಿದೆ. ಈ ರೋಗದ ಲಕ್ಷಣ ಕಂಡ ಕೂಡಲೇ ರೈತರು ನಿಯಂತ್ರಣ ಕ್ರಮ ಅನುಸರಿಸಬೇಕು. ಇಲ್ಲವಾದಲ್ಲಿ ನಿಯಂತ್ರಿಸುವುದು ಕಷ್ಟವಾಗಿದೆ. ಯಾವುದೇ ರಾಸಾಯನಿಕಗಳಿಂದ ರೋಗವನ್ನು ಕೂಡಲೇ ನಿಯಂತ್ರಿಸಲಾಗದು. ರೋಗ ಹರಡುವ ಎರಿಯೋಪೈಡ್ ನುಸಿಯನ್ನು ಕ್ರಿಮಿನಾಶಕ ಸಿಂಪಡಿಸುವ ಮೂಲಕ ನಿಯಂತ್ರಿಸಬಹುದಾಗಿದೆ. ಈ ರೋಗ ಉಲ್ಬಣಿಸಿದರೆ ಗಿಡದಲ್ಲಿ ಹೂ ಬಿಟ್ಟು, ಕಾಯಿ ಕಟ್ಟಿದರೂ ಕಾಯಿ ಬಲಿಯುವುದಿಲ್ಲ. ಗಿಡದ ಕೆಲವು ಭಾಗ ರೋಗ ಪೀಡಿತವಾಗಿದ್ದು, ಗಾಳಿಯ ಮೂಲಕ ಹರಡಲಿದೆ ಎಂದು ವಿಜ್ಞಾನಿಗಳಾದ ಡಾ.ಬದ್ರಿ ಪ್ರಸಾದ್, ಡಾ.ಎಂ.ಬಿ. ಪಾಟೀಲ ಹೇಳಿದ್ದಾರೆ.
ಬಾಧೆಗೆ ಒಳಗಾದ ಗಿಡಗಳನ್ನು ಕಿತ್ತು ನಾಶಪಡಿಸುವುದರಿಂದ ಹರಡುವಿಕೆಯನ್ನು ತಕ್ಕಮಟ್ಟಿಗೆ ನಿಯಂತ್ರಿಸಲು ಸಾಧ್ಯವಿದೆ. ನುಸಿ ನಾಶಕಗಳಾದ ಡೈಕೋಫಾಲ್ 2.5 ಮಿ.ಮೀ ಅಥವಾ ನೀರಿನಲ್ಲಿ ಕರಗುವ ಗಂಧಕ 3 ಗ್ರಾಂ, ಎಕೋಮೈಟ್ 1 ಮಿಲಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದು ಸಲಹೆ ನೀಡಿದರು.