ಕೊಪ್ಪಳ: ತಾಲೂಕಿನ ಲೇಬಗೇರಿ ಗ್ರಾಮದಲ್ಲಿ ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ನಡೆಯುವ ಶ್ರೀಮಾರುತಿ ದೇವರ ಕಾರ್ತಿಕೋತ್ಸವ ವಿಶೇಷತೆಯಿಂದ ಕೂಡಿದೆ.
ಲೇಬಗೇರಿ ಗ್ರಾಮದಲ್ಲಿ ಪ್ರತಿವರ್ಷ ನಡೆಯುವ ಮಾರುತಿ ದೇವರ ಕಾರ್ತಿಕೋತ್ಸವದಲ್ಲಿ ಮುಳ್ಳಿನ ಮೇಲೆ ಹಾರುವ ಆಚರಣೆ ನಡೆಯುತ್ತದೆ. ತಲೆ ತಲಾಂತರದಿಂದಲೂ ಈ ಸಂಪ್ರದಾಯವನ್ನು ನಡೆಸಿಕೊಂಡು ಬರುತ್ತಿದ್ದು, ಇಂದಿಗೂ ಸಹ ಆಚರಣೆಯಲ್ಲಿದೆ.
ಈ ವಿಶೇಷವಾದ ಕಾರ್ತಿಕತೋತ್ಸವದ ದಿನದಂದು ಬೆಳಗ್ಗೆ ಗ್ರಾಮದವರು ಕಾಡಿಗೆ ಹೋಗುತ್ತಾರೆ. ಯಾವುದೇ ಆಯುಧ ಬಳಸದೇ ಮುಳ್ಳು ಹೊಂದಿರುವ ಕಾರಿ ಗಿಡಗಳನ್ನು ಕಿತ್ತು ತರುತ್ತಾರೆ. ನಂತರ ಅವುಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಾಕಿ ಅದರ ಮೇಲೆ ಗ್ರಾಮದ ಚಿಕ್ಕಮಕ್ಕಳಿಂದ ಹಿಡಿದು ಎಲ್ಲ ವರ್ಗದ ಹರಕೆ ಹೊತ್ತ ಜನರು ಮುಳ್ಳಿನ ಮೇಲೆ ಹಾರುತ್ತಾರೆ.
ಮನೆಯ ಮಾಳಿಗೆಯಿಂದ ಮುಳ್ಳಿನ ರಾಶಿಯ ಮೇಲೆ ಹಾರುತ್ತಾರೆ. ಹೀಗೆ ಮುಳ್ಳಿನ ರಾಶಿಯ ಮೇಲೆ ಹಾರಿದವರ ಮೈ ಮೇಲೆ ಗಾಯಗಾಳಾಗಿದ್ದರೂ ಸಹ ಅವರಿಗೆ ಏನೂ ಆಗುವುದಿಲ್ಲವಂತೆ. ರಾತ್ರಿ ಮನೆಗೆ ಹೋಗಿ ಕರಿ ಕಂಬಳಿಯ ಮೇಲೆ ಮಲಗಿಕೊಂಡರೆ ಸಾಕು ಮುಳ್ಳುಗಳೆಲ್ಲ ಹೊರ ಬರುತ್ತವೆ ಅಂತಾರೆ ಯುವಕರು.
ಹಳ್ಳಿಗಳಲ್ಲಿ ಇಂದಿಗೂ ಸಹ ಅನೇಕ ಆಚರಣೆಗಳು ನಡೆಯುತ್ತವೆ. ಅದರಲ್ಲಿ ಈ ಆಚರಣೆ ಸ್ವಲ್ಪ ಭಿನ್ನ ಅನ್ನಿಸಿದರೂ ಇವ್ರಿಗೆ ನಂಬಿಕೆಯ ಪ್ರಶ್ನೆ. ಹೀಗಾಗಿ ಖುಷಿಯಿಂದಲೇ ಇಂದಿಗೂ ಸಹ ಆಚರಣೆ ಮಾಡ್ತಾ ಮನೆ ಮಕ್ಕಳೆಲ್ಲಾ ಭಾಗಿಯಾಗ್ತಾರೆ.
ಇದನ್ನೂ ಓದಿ: ಅನೈತಿಕ ಸಂಬಂಧ: ಗ್ರಾಮ ಪಂಚಾಯ್ತಿ ಸದಸ್ಯ ಸೇರಿದಂತೆ ಪತ್ನಿ ಕೊಲೆ ಮಾಡಿದ ಗಂಡ