ಕೊಪ್ಪಳ: ದೆಹಲಿಯಲ್ಲಿ ನಡೆದಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ರಾಜ್ಯದಿಂದ ಪಾಲ್ಗೊಂಡವರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಈಗಾಗಲೇ 39 ಜನರು ಪತ್ತೆಯಾಗಿದ್ದು, ಉಳಿದ 15 ಜನರ ಪತ್ತೆಗೆ ಮುಂದಾಗಿದ್ದೇವೆ ಎಂದು ಆರೋಗ್ಯ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಸಾಮೂಹಿಕ ಪ್ರಾರ್ಥನೆಯಲ್ಲಿ ರಾಜ್ಯದಿಂದ ಪಾಲ್ಗೊಂಡವರು ಸ್ವಯಂ ಆಗಿ ಬಂದು ಪರೀಕ್ಷೆ ಮಾಡಿಸಿಕೊಳ್ಳಿ. ನಾವು ನಿಮ್ಮ ಹೆಸರು, ವಿಳಾಸವನ್ನು ಬಹಿರಂಗಪಡಿಸುವುದಿಲ್ಲ ಎಂದು ಸಚಿವರು ಮನವಿ ಮಾಡಿದರು.
ರಾಜ್ಯದಲ್ಲಿ ಈವರೆಗೆ 98 ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. 3 ಸೋಂಕಿತರು ಮೃತಪಟ್ಟಿದ್ದಾರೆ. 6 ಸೋಂಕಿತರು ಗುಣಮುಖರಾಗಿದ್ದಾರೆ. ಸುಮಾರು 3243 ಜನರ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪಡೆದು ಪರೀಕ್ಷೆ ಮಾಡಲಾಗಿದೆ. ಈ ಪೈಕಿ 3025 ವರದಿ ನೆಗೆಟಿವ್ ಬಂದಿದೆ. ಉಳಿದ ವರದಿಗಾಗಿ ಕಾಯುತ್ತಿದ್ದೇವೆ ಎಂದರು.
ನಾವೆಲ್ಲರೂ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸಾಕಷ್ಟು ಪ್ರಯತ್ನದಿಂದಾಗಿ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಲಾಕ್ಡೌನ್ ಆದೇಶಕ್ಕೆ ಜನರು ಸಹಕಾರ ನೀಡುತ್ತಿದ್ದಾರೆ. ಕೊಪ್ಪಳ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡುವ ತೀರ್ಮಾನ ಮಾಡಲಾಗಿದೆ ಎಂದರು.
ಬಳ್ಳಾರಿಯಲ್ಲಿ ಪ್ರಯೋಗಾಲಯ ಆರಂಭವಾಗಲಿದೆ. ಎಲ್ಲರೂ ಸಹಕಾರ ಕೊಡಿ ಎಂದು ಸಚಿವ ಬಿ.ಶ್ರೀರಾಮುಲು ಮನವಿ ಮಾಡಿದರು.