ಗಂಗಾವತಿ: ತಮ್ಮ ವಿವಿಧ ಬೇಡಿಕೆಗಳ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಬೇಡಿಕೆ ಈಡೇರಿಸದೆ ಹೋದಲ್ಲಿ ರಾಜ್ಯಾದ್ಯಂತ ಒಂದು ಗಂಟೆ ವಿದ್ಯುತ್ ಸ್ಥಗಿತಗೊಳಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಇಂಧನ ಇಲಾಖೆಯ ನೌಕರರ ಸಂಘಟನೆ ಎಚ್ಚರಿಕೆ ನೀಡಿದೆ.
ಇಂಧನ ಇಲಾಖೆಯ ಹೊರ ಗುತ್ತಿಗೆ ನೌಕರರ ಪರವಾಗಿ ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡರೇಷನ್ (ಇಇಎಫ್ಐ) ಗೌರವಾಧ್ಯಕ್ಷೆ ಎಸ್. ವರಲಕ್ಷ್ಮಿ, ರಾಜ್ಯದ 1200 ವಿದ್ಯುತ್ ಉಪ ಕೇಂದ್ರಗಳಲ್ಲಿ ಹೊರಗುತ್ತಿಗೆಯಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
ಓದಿ: ಟಾಲಿವುಡ್ ನಟ ವಿಜಯ್ ರಂಗರಾಜು ವಿರುದ್ಧ ವಿಷ್ಣು ಅಭಿಮಾನಿಗಳ ಆಕ್ರೋಶ
ಆದರೆ ಕಳೆದ 20 ವರ್ಷಗಳಿಂದಲೂ ಅವರಿಗೆ ಸರಿಯಾದ ಸೌಲಭ್ಯಗಳು ಸಿಕ್ಕಿಲ್ಲ. ವಿದ್ಯುತ್ ಉತ್ಪಾದನೆ, ಪ್ರಸರಣ, ವಿತರಣೆ, ಶಿಫ್ಟ್ ಆಪರೇಟರ್, ಹೆಲ್ಪರ್, ಜೆಇ ಹೀಗೆ ನಾನಾ ವಿಭಾಗದಲ್ಲಿ ಸುಮಾರು ನಾಲ್ಕು ಸಾವಿರ ಜನ ಕೆಲಸ ಮಾಡುತ್ತಿದ್ದಾರೆ. ಹೊರಗುತ್ತಿಗೆ ಸ್ಥಗಿತಗೊಳಿಸಿ ಅವರನ್ನು ಖಾಯಂ ಮಾಡಬೇಕು ಎಂದು ಒತ್ತಾಯಿಸಿದರು.
ಇಲ್ಲದಿದ್ದರೆ, ರಾಜ್ಯಾದ್ಯಂತ ಒಂದು ಗಂಟೆ ವಿದ್ಯುತ್ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಿದ್ದೇವೆ. ಒಂದು ಗಂಟೆ ವಿದ್ಯುತ್ ಸ್ಥಗಿತವಾದರೆ ಸರ್ಕಾರಕ್ಕೆ ಹಾನಿಯಾಗಲಿದೆ. ಬಿಸಿ ಮುಟ್ಟಿಸುವ ಕಾರಣಕ್ಕೆ ಈ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ. ಸಾರಿಗೆ ನೌಕರರ ಮುಷ್ಕರದ ಬೆನ್ನಲ್ಲೇ ಇಂಧನ ಇಲಾಖೆಯ ಸಿಬ್ಬಂದಿ ಬೇಡಿಕೆ ಇಟ್ಟು ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸುವ ಯತ್ನಕ್ಕೆ ಮುಂದಾಗಿದ್ದಾರೆ.