ಕೊಪ್ಪಳ: ತುಂಗಭದ್ರಾ ಜಲಾಶಯದ ಎಡದಂಡೆ ನಾಲೆಯ ಟೇಲೆಂಡ್ಗೆ ಸಮರ್ಪಕ ನೀರು ಪೂರೈಕೆ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಯಚೂರು ಜಿಲ್ಲಾಧ್ಯಕ್ಷ ಡಿ.ವೀರನಗೌಡ ಅವರು ಆಗ್ರಹಿಸಿದರು.
ನಗರದ ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಡದಂಡೆ ನಾಲೆಯಲ್ಲಿ ನೀರು ಕಳ್ಳತನವಾಗುತ್ತದೆ. ಹೀಗಾಗಿ ಟೇಲೆಂಡ್ಗೆ ನೀರು ಸಮರ್ಪಕವಾಗಿ ಬರುವುದಿಲ್ಲ. ಈ ಕುರಿತಂತೆ ನಮ್ಮ ಸಂಘಟನೆ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಂಟಿಯಾಗಿ ಸಿದ್ಧಪಡಿಸಿರುವ ಅಧ್ಯಯನ ವರದಿಯನ್ನು ತುಂಗಭದ್ರಾ ಐಸಿಸಿ ಸದಸ್ಯರೂ ಆಗಿರುವ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುತ್ತೇವೆ ಎಂದರು.
ಪ್ರತಿಬಾರಿಯೂ ಎಡದಂಡೆ ನಾಲೆಯ ಟೇಲೆಂಡ್ ರೈತರಿಗೆ ಸಮರ್ಪಕವಾಗಿ ನೀರು ಬರುವುದಿಲ್ಲ. ಇದಕ್ಕೆ ಕಾರಣ ನಾಲೆಯ ನೀರು ಕಳ್ಳತನವಾಗುತ್ತದೆ. ಹೀಗೆ ನೀರು ಕಳ್ಳತನವಾಗುವುದರ ಹಿಂದೆ ದೊಡ್ಡ ಮಾಫಿಯಾ ಇದೆ. ಎಡದಂಡೆ ನಾಲೆಗೆ ಒಟ್ಟು ನಾಲ್ಕು ಉಪವಿಭಾಗಗಳಿವೆ. ಈ ನಾಲ್ಕರಲ್ಲಿ ವಡ್ಡರಹಟ್ಟಿ ಉಪವಿಭಾಗದ 36 ನೇ ಮೈಲ್ನಿಂದ 47 ನೇ ಮೈಲ್ವರೆಗೆ ನೀರು ಕಳ್ಳತನವಾಗುತ್ತದೆ. ಹೀಗಾಗಿ ಟೇಲೆಂಡ್ ರೈತರಿಗೆ ಸಮರ್ಪಕವಾಗಿ ನೀರು ಬರುವುದಿಲ್ಲ ಎಂದು ಆರೋಪಿಸಿದರು.
ಈಗಿರುವ ಪದ್ಧತಿಯಂತೆ ಎಡದಂಡೆ ನಾಲೆಗೆ ನೀರು ಹರಿಸಿದಾಗ ನೀರು ಬಿಟ್ಟ ದಿನದಿಂದ ಸುಮಾರು 15 ರಿಂದ 20 ದಿನದ ನಂತರ ಕೆಳಭಾಗಕ್ಕೆ ನೀರು ಬರುತ್ತದೆ. ಇರುವ ಎಲ್ಲ ನ್ಯೂನ್ಯತೆಗಳನ್ನು ಸರಿಪಡಿಸಿ ಟೇಲೆಂಡ್ ರೈತರಿಗೂ ಸಮರ್ಪಕ ನೀರು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಡಿ.ವೀರನಗೌಡ ಅವರು ಆಗ್ರಹಿಸಿದರು.