ಗಂಗಾವತಿ: ಕೊರೊನಾ ಸೋಂಕು ಕಾಣಿಸಿಕೊಂಡ ವ್ಯಕ್ತಿಯ ಪ್ರದೇಶವನ್ನ ಸೀಲ್ಡೌನ್ ಮಾಡಲು ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ.
ಇಲ್ಲಿನ ಕಿಲ್ಲಾ ಏರಿಯಾದಲ್ಲಿ ಸೋಂಕು ಕಾಣಿಸಿಕೊಂಡಿರುವ ವ್ಯಕ್ತಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತ ವಾಸಿಸುತ್ತಿರುವ ಪ್ರದೇಶವನ್ನು ಸೀಲ್ಡೌನ್ ಮಾಡಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಬೆಳಗ್ಗೆ ನಾಲ್ಕು ಗಂಟೆಗೆ ವ್ಯಕ್ತಿಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು. ಅದರ, ಬೆನ್ನಲ್ಲೆ ಸ್ಥಳಕ್ಕೆ ಆಗಮಿಸಿದ ನಗರಸಭೆಯ ಅಧಿಕಾರಿಗಳು, ಸೀಲ್ಡೌನ್ ಮಾಡುವ ಬಗ್ಗೆ ಚಿಂತನೆ ನಡೆಸಿದರು. ಆದರೆ, ಈವರೆಗೂ ಏನೂ ಕ್ರಮ ಕೈಗೊಂಡಿಲ್ಲ.
ಇದೀಗ ಈ ಪ್ರದೇಶದಲ್ಲಿ ಜನರ ಓಡಾಟ ಸಹಜವಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಗಾಂಧಿನಗರದಲ್ಲಿ ಪ್ರಕರಣ ಪತ್ತೆಯಾಗುತ್ತಿದ್ದಂತೆ ತಕ್ಷಣ ಸೀಲ್ಡೌನ್ ಮಾಡಿದ್ದ ಅಧಿಕಾರಿಗಳು, ಈಗ ಕಿಲ್ಲಾ ಏರಿಯಾವನ್ನು ಏಕೆ ಮಾಡುತ್ತಿಲ್ಲ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.