ಗಂಗಾವತಿ (ಕೊಪ್ಪಳ): ಕಾರಟಗಿ ತಾಲೂಕಿನ ನಾಗನಕಲ್ ಗ್ರಾಮದಲ್ಲಿನ ಲಕ್ಷ್ಮಿದೇವಿ ದೇಗುಲದೊಳಗೆ ಪ್ರವೇಶಕ್ಕೆ ದಲಿತ ಯುವಕನಿಗೆ ಪ್ರವೇಶ ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ದೇಗುಲದ ಪೂಜಾರಿ, ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಗ್ರಾಮದ ಒಟ್ಟು ಎಂಟು ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ಆರೋಪಿಗಳ ಹುಡುಕಾಟದಲ್ಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಕಾರಟಗಿ ಪೊಲೀಸ್ ಠಾಣೆಯ ಪಿಎಸ್ಐ ಯಲ್ಲಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: ನಾಗನಕಲ್ ಗ್ರಾಮದಲ್ಲಿ ದೇವಸ್ಥಾನ ಪ್ರವೇಶಕ್ಕೆ ದಲಿತ ವ್ಯಕ್ತಿಗೆ ನಿರ್ಬಂಧ, ದೂರು ದಾಖಲು
ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸಂತ್ರಸ್ತನೊಂದಿಗೆ ಮಾತನಾಡಿ ಮಾಹಿತಿ ಕಲೆ ಹಾಕಿದ್ದಾರೆ. ಆರೋಪಿಗಳು ಸಂತ್ರಸ್ತನಿಗೆ 11 ಸಾವಿರ ರೂಪಾಯಿ ದಂಡ ವಿಧಿಸಿರುವ ಬಗ್ಗೆ ಗೊಂದಲಗಳಿದ್ದು, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಇದು ವೈರಲ್ ಆಗಿತ್ತು. ಮೊದಲು ಸಂತ್ರಸ್ತನು ದೇವಸ್ಥಾನಕ್ಕೆ ಕಾಣಿಕೆ ರೂಪದಲ್ಲಿ ಹಣ ನೀಡಿದ್ದೆ ಎಂದು ಸುಳ್ಳು ಹೇಳಿದ್ದನು. ಆದರೆ ನಾವು ಗ್ರಾಮಕ್ಕೆ ತೆರಳಿ ವಿಚಾರಣೆ ನಡೆಸಿದಾಗ ದಂಡದ ರೂಪದಲ್ಲಿ ಹಣ ನೀಡಿರುವುದು ಸತ್ಯ ಎಂಬುದು ತಿಳಿದು ಬಂದಿತು. ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಯನ್ನ ಪೊಲೀಸರು ಕೈಗೊಂಡಿದ್ದಾರೆ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ತುಗ್ಲೆಪ್ಪ ದೇಸಾಯಿ ತಿಳಿಸಿದ್ದಾರೆ.